ಬೆಂಗಳೂರಿಗೆ ಬಿಗ್ ರಿಲೀಫ್: ಒಸಿ ಇಲ್ಲದ ಕಟ್ಟಡಗಳಿಗೂ ವಿದ್ಯುತ್ ಸಂಪರ್ಕ; ಸರ್ಕಾರದ ನಿರ್ಧಾರ ಏನು?

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ 1,200 ಚದರ ಅಡಿಗಳಿಗಿಂತ ಹೆಚ್ಚಿನ ವಿಸ್ತೀರ್ಣದ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ (OC) ಪಡೆಯುವುದರಿಂದ ವಿನಾಯಿತಿ ನೀಡಲು ಗುರುವಾರ ನಡೆದ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಆ ಮೂಲಕ ಈಗಾಗಲೇ ನಕ್ಷೆ ಪಡೆಯದೆ ಕಟ್ಟಡಗಳನ್ನು ನಿರ್ಮಿಸಿರುವ ಮತ್ತು ಒಸಿ ಪತ್ರ ಇಲ್ಲದಿದ್ದರೂ ವಿದ್ಯುತ್ ಸಂಪರ್ಕ ಕೋರಿ ಅರ್ಜಿ ಸಲ್ಲಿಸಿದ್ದ ಲಕ್ಷಾಂತರ ಕಟ್ಟಡ ನಿವಾಸಿಗಳಿಗೆ ಅನುಕೂಲವಾಗಲಿದೆ.

ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024ರ ಕಲಂ 241(7) ಅವಕಾಶದಡಿ 1,200 ಚದರ ಅಡಿಗಳಿಗಿಂತ ಹೆಚ್ಚಿನ ವಿಸ್ತೀರ್ಣದ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ.
ಇದನ್ನೂ ಓದಿ: ಇನ್ಮುಂದೆ ಮನೆ ಕಟ್ಟುವ ಮುಂಚೆ OC ಸರ್ಟಿಫಿಕೆಟ್ ಕಡ್ಡಾಯ: ಇಲ್ಲಾಂದ್ರೆ ವಿದ್ಯುತ್, ನೀರಿನ ಸಂಪರ್ಕವಿಲ್ಲ
ಸುಪ್ರೀಂ ಕೋರ್ಟ್ ಆದೇಶದ ಅನ್ವಯ ವಿದ್ಯುತ್ ಸಂಪರ್ಕ ಸೇರಿ ಮೂಲಭೂತ ಅಗತ್ಯ ಸೇವೆಗಳನ್ನು ಪಡೆಯಲು ಸ್ವಾಧೀನಾನುಭವ ಪ್ರಮಾಣ ಪತ್ರ ಕಡ್ಡಾಯವಾಗಿತ್ತು. ಆದರೆ, ನಕ್ಷೆ ಮಂಜೂರಾತಿ ಆಗದೆ ಒಸಿ ನೀಡಲು ಅವಕಾಶವಿರಲಿಲ್ಲ. ಈ ನಿಟ್ಟಿನಲ್ಲಿ ಬೆಂಗಳೂರು ಸೇರಿ ಕರ್ನಾಟಕದಾದ್ಯಂತ 3.30 ಲಕ್ಷ ಕಟ್ಟಡಗಳು ನಿರ್ಮಾಣಗೊಂಡರೂ ಒಸಿ ಇಲ್ಲದ್ದರಿಂದ ವಿದ್ಯುತ್ ಸಂಪರ್ಕ ನೀಡಿರಲಿಲ್ಲ. ಹೀಗಾಗಿ ವಿದ್ಯುತ್ ಸಂಪರ್ಕ ಕೋರಿ ಕಟ್ಟಡ ನಿವಾಸಿಗಳು ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಒಸಿ, ಸಿಸಿ ಇಲ್ಲದೇ ಬೆಸ್ಕಾಂನಿಂದ ವಿದ್ಯುತ್ ಹೊಸ ಸಂಪರ್ಕ; ಆನ್ ಲೈನ್ ನಲ್ಲಿಯೇ ಅಪ್ಲೈ ಮಾಡಿ
ಈಗಾಗಲೇ ನಿರ್ಮಾಣವಾಗಿರುವ ಎಲ್ಲ ಕಟ್ಟಡಗಳಿಗೆ ಒಂದು ಬಾರಿಗೆ ಮಾತ್ರ ಅನ್ವಯವಾಗುವಂತೆ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರತ್ಯೇಕ ಕಾನೂನು ರಚಿಸಲು ಸಂಪುಟ ತೀರ್ಮಾನಿಸಿದೆ. 1,200 ಚದರ ಅಡಿಗಳಿಗಿಂತ ಹೆಚ್ಚಿನ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಅಥವಾ ನಿರ್ಮಿಸಲಾಗುವ ಕಟ್ಟಡಗಳಿಗೆ ಸರ್ಕಾರ ಒಸಿಗಳಿಗೆ ಅರ್ಜಿ ಸಲ್ಲಿಸುವುದರಿಂದ ವಿನಾಯಿತಿ ನೀಡಿತ್ತು. ಇದು ನಿಯಮಗಳನ್ನು ಪಾಲಿಸದೆ ಕಟ್ಟಡಗಳನ್ನು ನಿರ್ಮಿಸಿದ್ದರೂ ಸಹ ಆಸ್ತಿ ಮಾಲೀಕರಿಗೆ ನೀರು, ವಿದ್ಯುತ್ ಮತ್ತು ಶೌಚಾಲಯ ಸಂಪರ್ಕ ಪಡೆಯಲು ಸಹಾಯವಾಗಲಿದೆ.
