ಡೆಲಿವರಿ ಕಾರ್ಮಿಕರಿಗೆ ಭರ್ಜರಿ ಸಿಹಿಸುದ್ದಿ: ಗಿಗ್ ಕಲ್ಯಾಣ ಮಂಡಳಿ ರಚನೆಗೆ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್

ಸ್ವಿಗ್ಗಿ, ಜೊಮಾಟೋ, ಅಮೆಜಾನ್, ಫ್ಲಿಪ್‌ಕಾರ್ಟ್, ಬಿಗ್ ಬಾಸ್ಕೆಟ್ ಸೇರಿದಂತೆ ಇ-ಕಾಮರ್ಸ್ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಗಿಗ್ ಕಾರ್ಮಿಕರಿಗೆ (ಸ್ವತಂತ್ರ್ಯ ಉದ್ಯೋಗಿಗಳು) ರಾಜ್ಯ ಸರ್ಕಾರವು 4 ಲಕ್ಷ ಮೌಲ್ಯದ ವಿಮೆ ಘೋಷಿಸಿದೆ. ಮುಂದುವರಿದಂತೆ ಗಿಗ್ ಕಾರ್ಮಿಕರ ನೆರವಿಗಾಗಿ ಸರ್ಕಾರವು ಇದೀಗ ರಾಜ್ಯದಲ್ಲಿ ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಲು ತೀರ್ಮಾನಿಸಿದೆ.

ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಲು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಜೊತೆ ದೆಹಲಿಯಲ್ಲಿ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಅಸಂಘಟಿತ ವಲಯದ ಈ ಕಾರ್ಮಿಕರಿಗೆ ಮೊದಲ ಬಾರಿಗೆ ಅಪಘಾತ ವಿಮೆ ಘೋಷಣೆ ಮಾಡಿದ್ದ ಕರ್ನಾಟಕ ಸರ್ಕಾರವು ಈಗ ಇನ್ನೊಂದು ಮಹತ್ವದ ನಿರ್ಧಾರ ಕೈಗೊಂಡು ಶ್ರಮಜೀವಿಗಳ ಬಗೆಗಿನ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರೂ ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ಅವರ ಪರವಾಗಿ ಧ್ವನಿ ಎತ್ತಿದ್ದರು. ನಂತರ ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಹತ್ತಾರು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಅಗತ್ಯ ಕ್ರಮಗಳಿಗಾಗಿ ಮುಂದಾಗಿತ್ತು ಎಂದಿದ್ದಾರೆ.
ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸುವ ಐತಿಹಾಸಿಕ ತೀರ್ಮಾನಕ್ಕೆ ಬರಲಾಗಿದ್ದು, ಇದಕ್ಕೆ ಸಂಬಂಧಿತ ಸಂಸ್ಥೆಗಳಿಂದ ಶೇ 5ರಷ್ಟು ಸೆಸ್ ಸಂಗ್ರಹಿಸುವುದು ಹಾಗೂ ಉಳಿದ ಅಗತ್ಯ ಹಣವನ್ನು ಸರ್ಕಾರವೇ ಭರಿಸಿ, ಗಿಗ್ ಕಾರ್ಮಿಕರ ಕಲ್ಯಾಣಕ್ಕೆ ಯೋಜನೆಗಳನ್ನು ರೂಪಿಸುವುದು, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಮೆಜಾನ್, ಫ್ಲಿಪ್‌ಕಾರ್ಟ್, ಓಲಾ, ಉಬರ್ ಮತ್ತು ಗಿಗ್ ಕೆಲಸಗಾರರನ್ನು ನೇಮಿಸಿಕೊಳ್ಳುವ ಇತರ ಕಂಪನಿಗಳಿಂದ 5% ಸೆಸ್ ಸಂಗ್ರಹಿಸಲಾಗುವುದು. ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲು ಅಗತ್ಯವಿರುವ ಉಳಿದ ಹಣವನ್ನು ರಾಜ್ಯ ಸರ್ಕಾರ ಒದಗಿಸುತ್ತದೆ ಎಂದಿದ್ದಾರೆ.