ಬೀದರ್ ಗೇಸ್ಟ್ ಹೌಸ್ ದುರಂತ: ಯುವಕನ ಸಾವು ಕೊಲೆ ಶಂಕೆಗೆ ತಿರುವು

ಬೀದರ್: ಬೀದರ್ ನಗರದ ಹಬ್ಸಿಕೋಟ್ ಗೆಸ್ಟ್ ಹೌಸ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಗೋದಿಹಿಪ್ಪರ್ಗಾ ಗ್ರಾಮದ ಯುವಕ ಪರಮೇಶ್ವರ (30) ಮೃತಪಟ್ಟಿದ್ದಾನೆ. ಹಲ್ಲೆ ಮಾಡಿ ನೇಣು ಹಾಕಿದ್ದಾರೆಂದು ಯುವಕನ ಮನೆಯವರು ಆರೋಪ ಮಾಡಿದ್ದಾರೆ. ಪ್ರಕರಣ ಸಂಬಂಧ ನಾಲ್ವರ ವಿರುದ್ಧ ಬೀದರ್ನ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಮೇಶ್ವರ ಕಳೆದ ಹಲವು ವರ್ಷದಿಂದ ಬೆಂಗಳೂರಿನಲ್ಲಿ ಖಡಕ್ ರೊಟ್ಟಿ, ಚೆಟ್ನಿ ಮಾರುವ ವ್ಯಾಪಾರ ಮಾಡಿಕೊಂಡಿದ್ದನು. ಬೆಂಗಳೂರಿನಲ್ಲಿ ಓರ್ವ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು. ಮಹಿಳೆಗೆ ಈಗಾಗಲೆ ಒಂದು ಮಗು ಇದೆ. ಅಕ್ರಮ ಸಂಬಂಧದಿಂದ ಮಹಿಳೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಳೆ.
ಗರ್ಭಿಣಿಯಾಗಿರುವ ವಿಚಾರ ತಿಳಿದು ಮದುವೆ ಮಾಡಿಕೊಳ್ಳುವಂತೆ ಪರಮೇಶ್ವರಗೆ ಮಹಿಳೆ ದುಂಬಾಲು ಬಿದ್ದಿದ್ದಳು. ಮಹಿಳೆಯ ಕಾಟ ತಾಳಲಾರದೆ ಪರಮೇಶ್ವರ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಬಂದಿದ್ದನು. ಆಗ, ಮಹಿಳೆ ಬೆಂಗಳೂರಿನಿಂದ ಮಹಿಳಾ ಸಂಘಟನೆಯ ಓರ್ವ ಮಹಿಳೆಯನ್ನು ಕರೆದುಕೊಂಡು ಪರಮೇಶ್ವರನ ಮನೆಗೆ ಹೋಗಿದ್ದಾಳೆ. ಶುಕ್ರವಾರ ಮಹಿಳೆ ಪರಮೇಶ್ವರನ ಮನೆಗೆ ಹೋಗಿ ಗಲಾಟೆ ಮಾಡಿ ಮದುವೆ ಮಾಡಿಕೊಳ್ಳುವಂತೆ ಹಠ ಹಿಡಿದಿದ್ದಳು.
ನಂತರ, ಪರಮೇಶ್ವರ ಮತ್ತು ಇತನ ಸ್ನೇಹಿತರು ಹಾಗೂ ಮಹಿಳೆ ಸೇರಿದಂತೆ ನಾಲ್ವರು ಐಬಿಯಲ್ಲಿದ್ದರು. ಆದರೆ, ಇಂದು ನೇಣು ಬಿಗಿದ ಸ್ಥಿತಿಯಲ್ಲಿ ಪರಮೇಶ್ವರ ಶವ ಪತ್ತೆಯಾಗಿದೆ. ಪರಮೇಶ್ವರ ಮನೆಯವರು ಬೀದರ್ನ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.
