ಹುಬ್ಬಳ್ಳಿ ಗಣೇಶ ಹಬ್ಬ: ಕೋಮುಸೌಹಾರ್ದತೆ ಮತ್ತು ಭಾವೈಕ್ಯತೆಯನ್ನು ಸಾರಿದ ವೈಭವವಂತ ಪ್ರದರ್ಶನ

ಹುಬ್ಬಳ್ಳಿ: ಉತ್ತರ ಕರ್ನಾಟಕದ ರಾಜಧಾನಿ ಅಂತಲೇ ಕರೆಸಿಕೊಳ್ಳುವ ಹುಬ್ಬಳ್ಳಿಕೋಮುಸೂಕ್ಷ್ಮ ನಗರ. ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದದಿಂದ ಆರಂಭವಾದ ಗಲಾಟೆ ಹಿಂದೂ- ಮುಸ್ಲಿಂ ನಡುವಿನ ಸಾಮರಸ್ಯವನ್ನು ಹಾಳು ಮಾಡಿದ್ದವು. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ನಡೆದಿದ್ದ ಅಟ್ಯಾಕ್ ಮತ್ತಷ್ಟು ಕಂದಕ ನಿರ್ಮಾಣ ಮಾಡಿತ್ತು. ಆದರೆ ಇದೀಗ ಇದೇ ಹುಬ್ಬಳ್ಳಿ, ಭಾವೈಕ್ಯತೆಗೆ ಸಾಕ್ಷಿಯಾಗುತ್ತಿದೆ. ಗಣೇಶ ಹಬ್ಬ ಹಿಂದೂ-ಮುಸ್ಲಿಂರ ನಡುವಿನ ಕಂದಕ ದೂರು ಮಾಡಿ ಸಾಮರಸ್ಯಕ್ಕೆ ನಾಂದಿ ಹಾಡುತ್ತಿದೆ.

ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯ ಜನರು ಕೋಮುಸಂಘರ್ಷಗಳಿಂದ ಈಗಾಗಲೇ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಸಹೋದರರಂತೆ ಇದ್ದ ಹಿಂದೂ-ಮುಸ್ಲಿಂರ ನಡುವೆ ಈದ್ಗಾ ಹೋರಾಟ ದ್ವೇಷದ ಬೆಂಕಿ ಹಚ್ಚಿತ್ತು. ನಂತರ ನಡೆದ ಅನೇಕ ಘಟನೆಗಳು, ಇತ್ತೀಚೆಗೆ ನಡೆದ ಹಳೆ ಹುಬ್ಬಳ್ಳಿ ಗಲಾಟೆ ಪ್ರಕರಣದಿಂದ ಹುಬ್ಬಳ್ಳಿ ನಗರದಲ್ಲಿ ದ್ವೇಷಮಯ ವಾತಾವರಣ, ಕೋಮುಸಂಘರ್ಷಗಳ ಬೆಂಕಿ ಹತ್ತಿತ್ತು. ಆದರೆ ಇದೀಗ ಪರಿಸ್ಥಿತಿ ತಿಳಿಯಾಗುತ್ತಿದ್ದು, ಜನರು ಸಾಮರಸ್ಯದಿಂದ ಬದಕುವುದನ್ನು ಕಲಿಯುತ್ತಿದ್ದಾರೆ. ಇಂತಹದೊಂದು ಸಾಮರಸ್ಯಕ್ಕೆ ನಾಂದಿಯಾಗಿರುವುದು ಗಣೇಶ ಹಬ್ಬ
ಕರ್ನಾಟಕದಲ್ಲಿಯೇ ಹುಬ್ಬಳ್ಳಿಯಲ್ಲಿ ಗಣೇಶ ಹಬ್ಬವನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹುಬ್ಬಳ್ಳಿ-ಧಾರವಾಡದಲ್ಲಿ 900ಕ್ಕೂ ಅಧಿಕ ಕಡೆ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಮಂಗಳವಾರ ನಡೆದ ಏಳು ದಿನಗಳ ಗಣೇಶ ಮೂರ್ತಿ ವಿಸರ್ಜನೆ ಭಾವೈಕ್ಯತೆ, ಕೋಮುಸೌಹಾರ್ದತೆಗೆ ಸಾಕ್ಷಿಯಾಯ್ತು. ನಗರದ ಘಂಟಿಕೇರಿ ಓಣಿಯಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ ನಗರದ ಶಹಬಜಾರ್ ಬಳಿಯ ಮಸೀದಿ ಬಂದಾಗ, ಗಣೇಶ ಮಂಡಳಿಯವರು ಕವಾಲಿ ಹಾಡು ಹಾಕುವ ಮೂಲಕ ಭಾವೈಕ್ಯತೆ ಸಾರಿದರು. ಈ ಸಮಯದಲ್ಲಿ ಹಿಂದೂ-ಮುಸ್ಲಿಂ ಎಲ್ಲರೂ ಸೇರಿ ಕವಾಲಿ ಹಾಡಿಗೆ ಹೆಜ್ಜೆ ಹಾಕಿ ಸಂತಸ ಪಟ್ಟರು. ಪರಸ್ಪರ ಅಭಿನಂದನೆ ಸಲ್ಲಿಸಿದರು.
ಇನ್ನು ಹುಬ್ಬಳ್ಳಿ ನಗರದ ಶಬರಿ ನಗರದಲ್ಲಿ ಮುಸ್ಲಿಂ ಬಾಂಧವರು, ಗಣೇಶ ಮೂರ್ತಿಗೆ ಮಾಲಾರ್ಪಣೆ ಮಾಡಿ, ತಮ್ಮ ಗೌರವ ಸಲ್ಲಿಸಿದರು. ಹಿಂದೂ-ಮುಸ್ಲಿಮರೆಲ್ಲರು ಸೇರಿ ಶುಭಾಷಯಗಳು ವಿನಿಮಯ ಮಾಡಿಕೊಂಡರು. ಅನೇಕ ಕಡೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಮುಸ್ಲಿಂ ಬಾಂಧವರು ಅನ್ನಪ್ರಸಾದ ವ್ಯವಸ್ಥೆ ಮಾಡಿದ್ದರು. ತಾವೇ ಮುಂದೆ ನಿಂತು ಪ್ರಸಾದ ವಿತರಣೆ ಕೂಡ ಮಾಡಿದರು. ಹೀಗಾಗಿ ಕಳೆದ ವರ್ಷ ಕೂಡ ಇದೇ ರೀತಿಯ ಸಾಮರಸ್ಯದಿಂದ ಗಣೇಶ ಹಬ್ಬ ಶಾಂತಿಯುತವಾಗಿ ನಡೆದಿತ್ತು. ಈ ವರ್ಷ ಕೂಡ ಸಾಮರಸ್ಯೆದ ಬೆಸುಗೆ ಮುಂದುವರಿದಿದ್ದು, ಗಣೇಶ ಹಬ್ಬ ಶಾಂತಿಯುತವಾಗಿ ನಡೆದಿದೆ.
ಕನ್ಮಣ ಸೆಳೆಯುತ್ತಿರುವ ಡಿಜಿಟಲ್ ಗಣೇಶ ಟೆಂಟ್ ನಿರ್ಮಾಣ
ಇನ್ನು ಒಂದೆಡೆ ಹುಬ್ಬಳ್ಳಿಯಲ್ಲಿ ಗಣೇಶ ಹಬ್ಬ ಸಾಮರಸ್ಯೆ, ಕೋಮುಸೌಹಾರ್ದತೆಗೆ ಸಾಕ್ಷಿಯಾದರೆ, ಹುಬ್ಬಳ್ಳಿಯಲ್ಲಿ ಪ್ರತಿಷ್ಠಾಪನೆ ಮಾಡಿರುವ ಅನೇಕ ಗಣೇಶ ಮೂರ್ತಿಗಳು ಸಾರ್ವಜನಿಕರ ಆಕರ್ಷಣೆಯನ್ನು ಹೆಚ್ಚಿಸುತ್ತಿವೆ. ನಗರದ ಬಾಬಾಸಾನಾ ಗಲ್ಲಿಯಲ್ಲಿ ಗಜಾನನ ಉತ್ಸವ ಯುವಕ ಮಂಡಳದಿಂದ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿ ಮತ್ತು ವೇದಿಕೆ ಎಲ್ಲರ ಆಕರ್ಷಣೆಗೆ ಕಾರಣವಾಗಿದೆ.
ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ನಿರ್ಮಾಣ ಮಾಡಿರುವ ಟೆಂಟ್ ತುಂಬಾ ಎಲ್ಇಡಿ ಪರದೆಗಳನ್ನು ಅಳವಡಿಸಲಾಗಿದೆ. ರಾತ್ರಿ ಸಮಯದಲ್ಲಿ ಎಲ್ಇಡಿ ಪರದೆಗಳ ಮೇಲೆ ಬ್ರಹ್ಮಾಂಡದ ಕೌತುಕದ ಮೂರು ನಿಮಿಷಗಳ ವಿಶೇಷ ಶೋ ಪ್ರಸಾರ ಮಾಡಲಾಗುತ್ತಿದ್ದು, ಜನರನ್ನು ಆಕರ್ಷಿಸುತ್ತಿದೆ. ಹನ್ನೆರಡು ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿ, ಇಂತಹದೊಂದು ಡಿಜಿಟಲ್ ಟೆಂಟ್ ನಿರ್ಮಾಣ ಮಾಡಲಾಗಿದೆ.
ಹುಬ್ಬಳ್ಳಿಯಲ್ಲಿ ಈ ಬಾರಿ ಒಂದೆಡೆ ಕೋಮುಸೌಹಾರ್ದತೆ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಅಲಂಕಾರ ಹೆಚ್ಚಿನ ಜನರ ಆಕರ್ಷಣೆ ಹೆಚ್ಚಿಸುತ್ತಿದೆ. ಹೀಗಾಗಿ ರಾಜ್ಯದ ವಿವಿಧೆಡೆಯಿಂದ ಜನರು ಹುಬ್ಬಳ್ಳಿಗೆ ಬಂದು, ಸಾರ್ವಜನಿಕ ಗಣೇಶ ಮೂರ್ತಿಗಳನ್ನು ವೀಕ್ಷಿಸಿ ಸಂತಸ ಪಡುತ್ತಿದ್ದಾರೆ.
