ಪ್ರೀತಿಯ ವಂಚನೆ: ಮದುವೆಯೆಂಬ ಹೆಸರಿನಲ್ಲಿ ಯುವತಿಗೆ ಲೈಂಗಿಕ ದೌರ್ಜನ್ಯ, ಆರೋಪಿ ವಿದೇಶಕ್ಕೆ ಪರಾರಿ!

ಬೆಂಗಳೂರು: ಯುವತಿಯನ್ನು ಪ್ರೀತಿಯ ಖೆಡ್ಡಾಕ್ಕೆ ಕೆಡವಿ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯು ವಿದೇಶಕ್ಕೆ ಪರಾರಿಯಾಗಿದ್ದು, ಸಂತ್ರಸ್ತ ಯುವತಿಯು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ಕತ್ರಿಗುಪ್ಪೆ ನಿವಾಸಿಯಾದ 22 ವರ್ಷದ ಸಂತ್ರಸ್ತ ಯುವತಿಯ ದೂರು ಆಧರಿಸಿ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು, ಭರತ್ ಮತ್ತು ಆತನ ತಂದೆ ಸೂರ್ಯಪ್ರಸಾದ್, ತಾಯಿ ಅನುರಾಧ, ಅಕ್ಕ ರಂಜಿತಾ ವಿರುದ್ಧ ದಲಿತರ ವಿರುದ್ಧದ ದೌರ್ಜನ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಂ ಮೂಲಕ ಯುವತಿಗೆ ಪರಿಚಯ
ಆರೋಪಿ ಭರತ್, ಇನ್‌ಸ್ಟಾಗ್ರಾಂ ಮೂಲಕ ಯುವತಿಗೆ ಪರಿಚಯವಾಗಿದ್ದ. ಬಳಿಕ ಅವರು ಸ್ನೇಹಿತರಾಗಿದ್ದರು. ನಂತರ ಆರೋಪಿಯು ಯುವತಿಗೆ ಪ್ರೇಮ ನಿವೇದನೆ ಮಾಡಿದ್ದ. ಇದಕ್ಕೆ ಯುವತಿಯು ತಮ್ಮಿಬ್ಬರದ್ದು ಬೇರೆ ಬೇರೆ ಜಾತಿಯಾಗಿದ್ದು, ಪೋಷಕರು ಮದುವೆಗೆ ಒಪ್ಪುವುದಿಲ್ಲಎಂದು ಹೇಳಿದ್ದರು. ಅದಕ್ಕೆ ಆರೋಪಿ, ”ನಿನ್ನ ಮೇಲೆ ನನಗೆ ಮನಸ್ಸಾಗಿದೆ. ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದು, ಜಾತಿ ಮುಖ್ಯವಲ್ಲ. ನಿನ್ನ ನಡವಳಿಕೆ, ಪ್ರೀತಿ ಮುಖ್ಯ,” ಎಂದು ಹೇಳಿದ್ದ. ಆಗ ಸಂತ್ರಸ್ತೆಯು ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದರು. (ಬೆಂಗಳೂರು ಯುವತಿಗೆ 25 ಲಕ್ಷ ರೂ. ಮೋಸ)
ಬಳಿಕ ಭರತ್, ಸಂತ್ರಸ್ತೆಯ ಮನೆಯಲ್ಲಿಯಾರೂ ಇಲ್ಲದ ವೇಳೆ ಅವರ ಮನೆಗೆ ಹೋಗಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದ. ಅಲ್ಲದೆ, ಸಂತ್ರಸ್ತೆಯನ್ನು ತನ್ನ ಮನೆಗೆ ಕರೆದೊಯ್ದು ಲೈಂಗಿಕ ಕ್ರಿಯೆ ನಡೆಸಿದ್ದ. ಕೆಲ ದಿನಗಳ ನಂತರ ಭರತ್, ”ಬೇರೆ ಜಾತಿಯ ಕಾರಣಕ್ಕೆ ಪೋಷಕರು ಮದುವೆಗೆ ಒಪ್ಪುತ್ತಿಲ್ಲ. ಪೋಷಕರ ವಿರೋಧದ ನಡುವೆಯೂ ನಿನ್ನನ್ನು ಮದುವೆಯಾಗಲು ಸಿದ್ಧನಿದ್ದೇನೆ. ಮದುವೆಗೆ ಸಿದ್ಧತೆ ಮಾಡಿಕೊಳ್ಳಿ,” ಎಂದು ಯುವತಿಗೆ ಹೇಳಿದ್ದ. ಹೀಗಾಗಿ, ಯುವತಿ ಪೋಷಕರು ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರು. (ನೀನ್ಯಾಕೆ ಸಾಯಬಾರದು ಎಂದು ಗಂಡನಿಗೆ ಕೇಳಿದ ಯುವತಿ)
ಪ್ರಿ ವೆಡ್ಡಿಂಗ್ ಶೂಟ್ ನಂತರ ಜೂಟ್
ಯುವತಿ ಕುಟುಂಬದವರು ಕಲ್ಯಾಣ ಮಂಟಪ ಸಹ ಬುಕ್ ಮಾಡಿದ್ದರು. ಭರತ್ ಮತ್ತು ಸಂತ್ರಸ್ತೆಯು ಪ್ರಿ ವೆಡ್ಡಿಂಗ್ ಫೋಟೊ ಶೂಟ್ ಕೂಡ ಮಾಡಿಸಿದ್ದರು. ನಂತರ ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದಾನೆ. ಸಂತ್ರಸ್ತೆಯ ಪೋಷಕರು ಭರತ್‌ನ ಮನೆಗೆ ಹೋಗಿ ವಿಚಾರಿಸಿದಾಗ ಆತ ವಿದೇಶಕ್ಕೆ ಹೋಗಿರುವ ವಿಚಾರ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೋಷಕರನ್ನು ಅವಮಾನಿಸಿ ಜಾತಿ ನಿಂದನೆ
ಭರತ್‌ನ ಪೋಷಕರು ಸಂತ್ರಸ್ತೆಯ ಪೋಷಕರನ್ನು ಅವಮಾನಿಸಿ, ಜಾತಿ ನಿಂದನೆ ಮಾಡಿದ್ದಾರೆ. ಭರತ್, ತನ್ನನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಭರತ್ ಮತ್ತು ಮದುವೆಗೆ ತಡೆಯೊಡ್ಡಿರುವ ಆತನ ಕುಟುಂಬ ಸದಸ್ಯರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಸಂತ್ರಸ್ತೆಯು ದೂರಿನಲ್ಲಿ ಮನವಿ ಮಾಡಿದ್ದಾರೆ.
