ದೇವನಹಳ್ಳಿಯಲ್ಲಿ ಖಾಸಗಿ ಕಂಪನಿಗೆ ಬೆಸ್ಕಾಂ ಶಾಕ್: ಮೂರು ತಿಂಗಳಿಗೆ 20 ಲಕ್ಷ ರೂ. ವಿದ್ಯುತ್ ಬಿಲ್, ಮಾಲೀಕರ ಆಕ್ರೋಶ

ದೇವನಹಳ್ಳಿ: ನಗರದ ಖಾಸಗಿ ಕಂಪನಿಯೊಂದಕ್ಕೆ 20 ಲಕ್ಷ ರೂ. ವಿದ್ಯುತ್ ಬಿಲ್ ಅನ್ನು ನೀಡುವ ಮೂಲಕ ಬೆಸ್ಕಾಂ ಶಾಕ್ ನೀಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಘಟನೆ ಕಂಡುಬಂದಿದೆ. ಎಂಎಸ್ ಫುಡ್ ಆ್ಯಂಡ್ ಬೇವರೇಜಸ್ ಕಂಪನಿಗೆ ಮೂರು ತಿಂಗಳಿಗೆ ಬರೋಬ್ಬರಿ 20 ಲಕ್ಷ ರೂ ಬಿಲ್ ನೀಡಲಾಗಿದೆ.

ಮೂರು ತಿಂಗಳ ಹಿಂದೆ ಅಷ್ಟೇ ಎಂಎಸ್ ಫುಡ್ ಆ್ಯಂಡ್ ಬೇವರೇಜಸ್ ಕಂಪನಿ ಆರಂಭಿಸಲಾಗಿದೆ. ಸದ್ಯ ಬೆಸ್ಕಾಂನ ನಡೆಗೆ ಖಾಸಗಿ ಕಂಪನಿ ಮಾಲೀಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಸಗಿ ಕಂಪನಿಗೆ ಮೂರು ತಿಂಗಳಿಂದ ಬಿಲ್ ನೀಡದೆ ಬೆಸ್ಕಾಂ ನಿರ್ಲಕ್ಷ್ಯ ವಹಿಸಿದೆ. ಇದೀಗ ಒಂದೇ ಬಾರೀ 20 ಲಕ್ಷ ರೂ. ಬಿಲ್ ನೀಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಬೆಸ್ಕಾಂ ಎಇಇ ಅಧಿಕಾರಿಗೆ ಕರೆ ಮಾಡಿದರು ಫೋನ್ ತೆಗೆಯುವುದಿಲ್ಲ ಎಂದು ಆರೋಪ ಮಾಡಲಾಗಿದ್ದು, 20 ಲಕ್ಷ ರೂ ಒಂದೇ ಬಾರೀ ಕಟ್ಟಲು ಖಾಸಗಿ ಕಂಪನಿ ಮಾಲೀಕ ನಿರಾಕರಿಸಿದ್ದಾರೆ. ಹಂತ ಹಂತವಾಗಿ ಬಿಲ್ ಹಣವನ್ನ ಕಟ್ಟಲು ಅವಕಾಶ ಕೊಡುವಂತೆ ಒತ್ತಾಯಿಸಿದ್ದಾರೆ.
ಈ ರೀತಿಯ ಘಟನೆಗಳು ರಾಜ್ಯದಲ್ಲಿ ಈ ಮುಂಚೆ ಕೂಡ ನಡೆದಿವೆ. ಇತ್ತೀಚೆಗೆ ಉಚಿತವಾಗಿ ವಿದ್ಯುತ್ ಬಳಸುತ್ತಿದ್ದ ಮನೆಗಳಿಗೆ ಬೆಸ್ಕಾಂ ಅಡಿಷನಲ್ ಸೆಕ್ಯೂರಿಟೀ ಡೆಪಾಸಿಟಿ ಹೆಸರಲ್ಲಿ ಸಾವಿರಾರು ರೂ. ಹಣ ಕಟ್ಟುವಂತೆ ತಿಂಗಳ ಬಿಲ್ ಜೊತೆಗೆ ನೀಡಿತ್ತು. ಇದು ಮನೆ ಮಾಲೀಕರು ಮತ್ತು ಬಾಡಿಗೆಗೆದಾರರ ಆಕ್ರೋಶಕ್ಕೂ ಕಾರಣವಾಗಿತ್ತು.
ವಿದ್ಯುತ್ ಬಗ್ಗೆ ಜಾಗ್ರತೆ ಇರಲಿ ಹಾಗೂ ಸುರಕ್ಷಾ ಕ್ರಮಗಳನ್ನು ಸದಾ ಅನುಸರಿಸುವಂತೆ ಬೆಸ್ಕಾಂ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ವಿದ್ಯುತ್ ಸಂಬಂಧಿತ ಯಾವುದೇ ಅವಘಡಗಳು ಸಂಭವಿಸಿದ್ದಲ್ಲಿ ಕೂಡಲೇ ಬೆಸ್ಕಾಂ 24×7 ಸಹಾಯವಾಣಿ 1912ಕ್ಕೆ ಕರೆಮಾಡಿ ಹಾಗೂ ನಿಮ್ಮ ಸಮೀಪದ ಬೆಸ್ಕಾಂ ಉಪವಿಭಾಗಕ್ಕೆ ಭೇಟಿ ನೀಡಿವಂತೆ ತಿಳಿಸಿದೆ.