ಬೆಂಗಳೂರು ಟನಲ್ ರಸ್ತೆ ಯೋಜನೆ: ‘ಕಾರಿಲ್ಲ ಅಂದ್ರೆ ಹೆಣ್ಣು ಕೊಡಲ್ಲ ಎಂಬ ಪಿಡುಗು ದೂರ ಮಾಡಲು ಡಿಕೆಶಿ ಯೋಜನೆ?’ – ತೇಜಸ್ವಿ ಸೂರ್ಯ ಟಾಂಗ್

ಬೆಂಗಳೂರು: ಕಾರಿಲ್ಲ ಅಂದ್ರೆ ಹೆಣ್ಣು ಕೊಡಲ್ಲ ಅಂತ ಟನಲ್ ರಸ್ತೆ ಮಾಡುವುದಕ್ಕೆ ಡಿ.ಕೆ.ಶಿವಕುಮಾರ್ ಅವರು ಹೊರಟಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಟಾಂಗ್ ಕೊಟ್ಟರು.

ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಟನಲ್ ಯೋಜನೆ ಮಾಡ್ತಿಲ್ಲ. ಕಾರು ಇಲ್ಲ ಎಂದರೆ ಹೆಣ್ಣು ಕೊಡಲ್ಲ ಅಂತ ಡಿಕೆಶಿ ಹೇಳಿದ್ದಾರೆ. ಎಲ್ಲಾರೂ ಕಾರು ಬಳಸುತ್ತಾರೆ, ಕಾರ್ ಇಲ್ಲ ಅಂದರೆ ಹೆಣ್ಣು ಕೊಡಲ್ಲ ಎಂದಿದ್ದಾರೆ. ಈಗ ಅರ್ಥ ಆಯ್ತು, ಟನಲ್ ಮಾಡ್ತಾ ಇರೋದು ಟ್ರಾಫಿಕ್ ಕಡಿಮೆ ಮಾಡೋಕೆ ಅಲ್ಲ. ಬದಲಾಗಿ ಸಾಮಾಜಿಕ ಪಿಡುಗು ದೂರ ಮಾಡೋಕೆ. ಹೆಣ್ಣು ಕೊಡದೇ ಇರೋದನ್ನ ತಪ್ಪಿಸೋಕೆ ಈ ಯೋಜನೆ ತರ್ತಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಟನಲ್ ರಸ್ತೆಯಲ್ಲಿ 4 ಲೇನ್ ರಸ್ತೆ ಇರುತ್ತೆ. ಎಕ್ಸಿಟ್ ಜಾಗದಲ್ಲಿ 4 ಲೇನ್‌ನ ಟ್ರಾಫಿಕ್ ಬಂದು ಸೇರೋದು 2 ಲೇನ್ ರಸ್ತೆಗೆ. ಆಗ ಎಕ್ಸಿಟ್ ಜಾಗದಲ್ಲಿ ಅಲ್ಲೊಂದು ಹೊಸ ಟ್ರಾಫಿಕ್ ಜಾಮ್ ಆಗುತ್ತೆ. ಈ ಥರ 22 ಕಡೆ ಎಕ್ಸಿಟ್‌ಗಳು ಟನಲ್ ರೋಡ್‌ಗಿದೆ. ಯೋಜನೆಗೆ ಪರಿಸರದ ಅಧ್ಯಯನ ಮಾಡಿಲ್ಲ. ಲಾಲ್‌ಬಾಗ್‌ನ ಹಳೇ ಶಿಲೆಗೆ ಈ ಯೋಜನೆ ಮಾರಕ. ಟನಲ್ ರಸ್ತೆಗೆ ಪರ್ಯಾಯ ಪರಿಹಾರ ಕೊಡಲಿಲ್ಲ ಅಂತ ಡಿಕೆಶಿ ಹೇಳಿದ್ದಾರೆ. ಅದು ಸುಳ್ಳು, ನಾವು ಐದು ಪರ್ಯಾಯ ಪರಿಹಾರ ಕೊಟ್ಟಿದ್ದೀವಿ. ಅರ್ಧ ಮುಗಿದ ಕಾಮಗಾರಿಗಳನ್ನು ಮುಗಿಸಿ ಅಂದಿದ್ದೇವೆ. ಸಾರ್ವಜನಿಕ ಸಂಚಾರ ವ್ಯವಸ್ಥೆಗೆ ಆದ್ಯೆತೆಗೆ ಕೊಡಿ ಅಂದಿದ್ದೇವೆ. ಹೆಚ್ಚು ಕಾರುಗಳನ್ನು ಸಾಗಿಸುವ ಯೋಜನೆಗಿಂತ ಹೆಚ್ಚು ಜನರನ್ನು ಸಾಗಿಸುವ ಯೋಜನೆ ಮಾಡಿ ಅಂದಿದ್ದೇವೆ. ರೈಲು ಆಧಾರಿತ ಸಂಚಾರ ವ್ಯವಸ್ಥೆ ಮಾಡಿ ಅಂದಿದ್ದೇವೆ, ಸಬರ್ಬನ್, ಮೆಟ್ರೋ, ಟ್ರಾಂಗಳು ನಗರಕ್ಕೆ ಬೇಕಿವೆ ಎಂದು ಒತ್ತಾಯಿಸಿದರು.
ಬೆಂಗಳೂರಿನಲ್ಲಿ 300 ಕಿಮೀವರೆಗೆ ಮೆಟ್ರೋ ಜಾಲ ಅಭಿವೃದ್ಧಿ ಪಡಿಸಲಿ. ಆಗ ಸಂಚಾರ ಸಮಸ್ಯೆ ಕಡಿಮೆ ಆಗಲಿದೆ. ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಟಿಕೆಟ್ ದರ ಗಗನ ಮುಟ್ಟಿದೆ. ಮೆಟ್ರೋ ಟಿಕೆಟ್ ದರ ಇಳಿಸಲು ಆಗ್ರಹಿಸಿದ್ದೇವೆ. ಮೆಟ್ರೋದಲ್ಲಿ ಹೋಗೋಕ್ಕಿಂತ ಬೈಕ್, ಕಾರುಗಳಲ್ಲಿ ಕರ್ಚು ಕಮ್ಮಿ ಆಗುತ್ತೆ. ಮೆಟ್ರೋ ಟಿಕೆಟ್ ದರ ಜನ ಕಾರು ಬಿಟ್ಟು ಮೆಟ್ರೋ ಹತ್ತುವ ಹಾಗಿರಬೇಕು ಎಂದು ತಿಳಿಸಿದರು.
ಉಗ್ರರ ದಾಳಿಗಿಂತ ಹೆಚ್ಚು ಬೆಂಗಳೂರಿನಲ್ಲಿ ನಿತ್ಯ ರಸ್ತೆ ಅವಘಡಗಳಿಂದ ಜನರು ಸಾವನ್ನಪ್ಪುತ್ತಿದ್ದಾರೆ. ಬೆಂಗಳೂರಿನಲ್ಲಿ 317 ಕಿ.ಮೀ. ಮೆಟ್ರೋ ಸಂಚಾರ ಮಾಡಿ. ಮೂರು ನಿಮಿಷಗಳಿಗೊಮ್ಮೆ ಮೆಟ್ರೋ ಓಡಾಡುವ ರೀತಿಯಲ್ಲಿ ಮಾಡಿ. ಮೆಟ್ರೋ ದರವನ್ನು ಶೀಘ್ರದಲ್ಲೇ ಇಳಿಸಿ ಎಂದು ಕೇಳಿದ್ದೇನೆ. ದಿನಕ್ಕೆ ಹತ್ತು ಲಕ್ಷ ಜನರು ಮೆಟ್ರೋದಲ್ಲಿ ಓಡಾಡ್ತಿದ್ದಾರೆ. 45 ಲಕ್ಷ ಜನರು ಬಸ್ಸುಗಳಲ್ಲಿ ಓಡಾಡ್ತಿದ್ದಾರೆ. ಅದಕ್ಕಾಗಿ 55 ಲಕ್ಷ ಜನರು ಓಡಾಡಲು ಮೆಟ್ರೋ ವಿಸ್ತರಣೆ ಹಾಗೂ ದರ ಇಳಿಸಿ ಎಂದಿದ್ದೇವೆ. ಆದರೆ ಡಿಕೆ ಶಿವಕುಮಾರ್ ಮಾತ್ರ, ಕಾರಿಲ್ಲ ಅಂದರೆ ಹೆಣ್ಣು ಕೊಡಲ್ಲ ಅಂತ ಟನಲ್ ಮಾಡೋದಾಗಿ ಹೇಳಿದ್ದಾರೆ.
ಬೆಂಗಳೂರು ಬಿಎಂಟಿಸಿ ಬಸ್‌ಗಳಲ್ಲಿ 45 ಲಕ್ಷ ಜನ ನಿತ್ಯ ಓಡಾಡ್ತಿದ್ದಾರೆ. 300 ಕಿಮೀ ಮೆಟ್ರೋ ಸಂಪರ್ಕ ಪೂರ್ಣವಾದರೆ ಹಾಗೂ ಸಬರ್ಬನ್ ಬಂದರೆ ನಿತ್ಯ 50 ಲಕ್ಷ ಜನ ಓಡಾಡ್ತಾರೆ. ಬಹುತೇಕ ಸಂಚಾರ ಸಮಸ್ಯೆ ಬಗೆಹರಿಯುತ್ತೆ ಇದರಿಂದ. ಟನಲ್ ಯೋಜನೆಗೆ ಕೇಂದ್ರದಿಂದ ಅನುದಾನ ತನ್ನಿ ಅಂತಾರೆ ನಮಗೆ. ನಾವು ಟನಲ್ ಯೋಜನೆಗೆ ಕೇಂದ್ರದಿಂದ ಅನುದಾನ ಕೇಳಲ್ಲ. ನಾವು ಅನುದಾನ ಕೇಳೋದು ಸಬರ್ಬನ್ ರೈಲು ಯೋಜನೆಗೆ ಅನುದಾನ ತರ್ತೇವೆ ಎಂದು ಡಿಕೆಶಿಗೆ ತೇಜಸ್ವಿ ಸೂರ್ಯ ಟಾಂಗ್ ಕೊಟ್ಟರು.
ಗಾಜಾ ಸ್ಟ್ರಿಪ್‌ನಲ್ಲಿ ಬಾಂಬ್ ಹಾಕಿದಂತೆ ಆಗಿದೆ ನಮ್ಮ ಬೆಂಗಳೂರಿನ ಟ್ರಾಫಿಕ್. ಪ್ರಪಂಚದ ವಿವಿಧ ನಗರಗಳಲ್ಲಿ ಮಾಡಿದಂತೆ ಬೆಂಗಳೂರಲ್ಲಿ ಟ್ರಾಂ ಸಾರಿಗೆ ಮಾಡಿ. ಗುಂಡಿ ಮುಚ್ಚಲು ಕೇಂದ್ರದಿಂದ ಫಂಡಿಂಗ್ ಏನು ಬೇಕಿಲ್ಲ, ಇವರೇ ಮುಚ್ಚಬಹುದು. ಒಳ್ಳೆಯ ರಸ್ತೆ, ಒಳ್ಳೆಯ ಫುಟ್‌ಪಾತ್‌ಗಳನ್ನು ಮಾಡಿ. ದೇಶದ ಎಷ್ಟೋ ನಗರಗಳಲ್ಲಿ ಟನಲ್ ಮಾಡೋಕೆ ಹೋಗಿ ಕೈಬಿಟ್ಟಿದ್ದಾರೆ. ಹೆಬ್ಬಾಳ ಮೇಲ್ಸುತುವೆ ಉದ್ಘಾಟನೆ ಮಾಡಿದ್ರಲ್ಲ ಡಿಕೆಶಿ ಜಾವಾ ಬೈಕ್‌ನಲ್ಲಿ. ಅದರಿಂದ ಟ್ರಾಫಿಕ್ ಕಡಿಮೆ ಆಯ್ತಾ? ಹೆಬ್ಬಾಳದಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆ ವರೆಗೆ ಬಂದು ಟ್ರಾಫಿಕ್ ನಿಂತುಕೊಳ್ತು ಎಂದರು.
ಕಾರಿಲ್ಲ ಅಂದ್ರೆ ಹೆಣ್ಣು ಕೊಡ್ತಿಲ್ಲ ಅಂತ ಟನಲ್ ರಸ್ತೆ ಮಾಡಲು ಡಿಕೆಶಿ ಹೊರಟಿದ್ದಾರೆ. ಕಾರಿಲ್ಲದಿದ್ರೂ ಹೆಣ್ಣು ಕೊಡ್ತಾರೆ, ಕೊಟ್ಟಿದ್ದಾರೆ. ಬಸ್‌ನಲ್ಲಿ ಓಡಾಡೋರಿಗೂ, ಮೆಟ್ರೋದಲ್ಲಿ ಓಡಾಡೋರಿಗೂ ಹೆಣ್ಣು ಕೊಟ್ಟಿದ್ದಾರೆ. ಡಿಕೆಶಿ ಅವರು ಕಾರಿಲ್ಲದಿದ್ರೆ ಹೆಣ್ಣು ಕೊಡಲ್ಲ ಅನ್ನೋ ಭಾವನೆಯಿಂದ ಹೊರಗೆ ಬರಬೇಕು. ಕಾರುಗಳಿಗಾಗಿ ಟನಲ್ ಯೋಜನೆ ಮಾಡೋದು ಬೇಡ. ಇಷ್ಟು ಹೇಳಿದ ಮೇಲೂ ಟನಲ್ ಯೋಜನೆ ಮಾಡ್ತೀವಿ ಅಂತ ಹೋದರೆ ನಾವು ವಿರೋಧ ಮಾಡ್ತೀವಿ. ಕಾನೂನು ಹೋರಾಟ ಮಾಡ್ತೀವಿ, ಜನಾಂದೋಲನ ಮಾಡ್ತೀವಿ ಎಂದು ಎಚ್ಚರಿಸಿದರು.
ಟನಲ್ ರಸ್ತೆ ಯೋಜನೆಗೆ ಸರ್ಕಾರ ಹಟ ಹಿಡಿದಿದೆ. ಸರ್ಕಾರದ ನಡೆ ಜನರಿಗೆ ಅನುಮಾನ ಮೂಡಿಸಿದೆ. ನಿನ್ನೆ ಡಿಸಿಎಂಗೆ ಒಂದೂಕಾಲು ಗಂಟೆ ಟನಲ್ ಯೋಜನೆ ಯಾಕೆ ಬೇಡ ಅಂತ ವಿವರಿಸಿದೆ. ಪರ್ಯಾಯ ಏನು ಅಂತ ಹೇಳಿದೆ. ಆದರೂ ಅವರು ನಾನೇನೂ ಪರ್ಯಾಯ ಪರಿಹಾರ ಹೇಳಲಿಲ್ಲ ಅಂದಿದ್ದಾರೆ. ನನಗೆ ಇನ್ನೇನು ಪರ್ಯಾಯ ಕೊಡಬೇಕೋ ಗೊತ್ತಾಗ್ತಿಲ್ಲ ಎಂದು ಬೇಸರಿಸಿದರು.