ಬೆಂಗಳೂರು: ಬಡತನ-ನಿರ್ಲಕ್ಷ್ಯದಿಂದ ತಾಯಿ ಗರ್ಭದಲ್ಲೇ ತ್ರಿವಳಿ ಶಿಶುಗಳ ಸಾವು

ಬೆಂಗಳೂರು/ಆನೇಕಲ್: ಪ್ರೀತಿಸಿ ಮದುವೆಯಾಗಿದ್ದಕ್ಕಾಗಿ ಪೋಷಕರಿಂದ ನಿರ್ಲಕ್ಷ್ಯಕ್ಕೊಳಗಾದ ಜೋಡಿ ಬೀದಿಗೆ ಬಂದಿದ್ದರು. ಗಾರೆ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ಜೋಡಿಗೆ, ತಮ್ಮ ಪ್ರೀತಿಯ ಸಂಕೇತವಾಗಿದ್ದ ಗರ್ಭದಲ್ಲಿದ್ದ ತ್ರಿವಳಿ ಕಂದಮ್ಮಗಳಿಗೆ ಸಮರ್ಪಕ ತಪಾಸಣೆ ಹಾಗೂ ಚಿಕಿತ್ಸೆ ದೊರೆಯದೆ ತಾಯಿ ಗರ್ಭದಲ್ಲೇ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಗೊಲ್ಲಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಪ್ರೀತಿಸಿ ಮದುವೆಯಾಗಿದ್ದ ಮಹಿಳೆ ಗರ್ಭ ಧರಿಸಿ (Love Married Pregnant woman) ಆಕೆಯ ಹೊಟ್ಟೆಯಲ್ಲಿ ತ್ರಿವಳಿ ಮಕ್ಕಳಿರುವುದೂ ಗೊತ್ತಿರಲಿಲ್ಲ. ಜೊತೆಗೆ, ಆ ಮಹಿಳೆಗೆ ಸೂಕ್ತ ವೈದ್ಯಕೀಯ ಆರೈಕೆ ಮತ್ತು ಪೌಷ್ಟಿಕಾಂಶದ ಕೊರತೆಯಿಂದಾಗಿ ಗರ್ಭದಲ್ಲೇ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಆನೇಕಲ್‌ನ ಬನ್ನೇರುಘಟ್ಟ ಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಡತನ, ಅಜ್ಞಾನ ಮತ್ತು ವೈದ್ಯಕೀಯ ಸೇವೆಗಳ ನಿರ್ಲಕ್ಷ್ಯ ಈ ದುರಂತಕ್ಕೆ ಕಾರಣವಾಗಿದೆ.
ದುರ್ಘಟನೆಯ ವಿವರ:
ಬನ್ನೇರುಘಟ್ಟ ಗ್ರಾಮದ (Bengaluru Bannerghatta village) ಆನಂದ್ ಮತ್ತು ಮಂಜುಳಾ ದಂಪತಿ ಸುಮಾರು 5 ವರ್ಷಗಳ ಹಿಂದೆ ಪ್ರೀತಿಸಿ (Love Marriage) ವಿವಾಹವಾಗಿದ್ದರು. ಈ ದಂಪತಿಗೆ ಈಗಾಗಲೇ ಮೂರು ವರ್ಷದ ಹೆಣ್ಣು ಮಗು ಇದೆ. ಇತ್ತೀಚೆಗೆ ಎರಡನೇ ಬಾರಿ ಗರ್ಭಿಣಿಯಾಗಿದ್ದ ಮಂಜುಳಾ, ತ್ರಿವಳಿ ಶಿಶುಗಳನ್ನು ಹೊತ್ತಿದ್ದರು. ಆನಂದ್ ಮತ್ತು ಮಂಜುಳಾ ಇಬ್ಬರೂ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಪ್ರೀತಿಸಿ ಮದುವೆಯಾಗಿದ್ದ ಕಾರಣ ಕುಟುಂಬದವರು ಇವರನ್ನು ನಿರ್ಲಕ್ಷಿಸಿದ್ದರು. ಆನಂದ್ ಅವರ ಸಹೋದರನೊಂದಿಗಿನ ಕಲಹದಿಂದಾಗಿ ಮನೆ ಬಿಟ್ಟು ಬಂದಿದ್ದ ಈ ದಂಪತಿಗೆ ಸೂಕ್ತ ಆಸರೆಯೂ ಇರಲಿಲ್ಲ.
ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿದ್ದ ಕಾರಣ, ಮಂಜುಳಾ ಅವರಿಗೆ ನಿಯಮಿತವಾಗಿ ವೈದ್ಯಕೀಯ ತಪಾಸಣೆ (Medical Chekup) ಮಾಡಿಸಲು ಸಾಧ್ಯವಾಗಿರಲಿಲ್ಲ. ಏಪ್ರಿಲ್ ತಿಂಗಳಲ್ಲಿ ತಾಯಿ ಕಾರ್ಡ್ ಮಾಡಿಸಿದ್ದರೂ ಸಹ, ನಂತರದ ದಿನಗಳಲ್ಲಿ ತಪಾಸಣೆ ಮಾಡಿಸಿಕೊಂಡಿರಲಿಲ್ಲ. ಹಲವಾರು ಬಾರಿ ಆಶಾ ಕಾರ್ಯಕರ್ತೆಯರು ತಪಾಸಣೆಗಾಗಿ ಕರೆಯುತ್ತಿದ್ದರೂ, ದಂಪತಿ ವೈದ್ಯಕೀಯ ಆರೈಕೆಯನ್ನು ನಿರ್ಲಕ್ಷಿಸಿದ್ದರು.
ದುರಂತದ ಅಂತಿಮ ಕ್ಷಣಗಳು:
ಕಳೆದ ಶನಿವಾರ ಮಂಜುಳಾ ಅವರಿಗೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಒಂದು ಗಂಡು ಮಗು ಜನಿಸಿದೆ, ಆದರೆ ಅದು ಮೊದಲೇ ಸಾವನ್ನಪ್ಪಿತ್ತು. ಕೂಡಲೇ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿದಾಗ, ಅವರು ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ತೆರಳಲು ಸೂಚಿಸಿದ್ದಾರೆ. ದಂಪತಿ ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ನಂತರ ಆನೇಕಲ್ ತಾಲ್ಲೂಕು ಆಸ್ಪತ್ರೆಗೆ ತೆರಳಿದಾಗ ವೈದ್ಯರು ಹೊಟ್ಟೆಯಲ್ಲಿ ಇನ್ನೂ ಎರಡು ಶಿಶುಗಳು ಸಾವನ್ನಪ್ಪಿರುವುದನ್ನು ದೃಢಪಡಿಸಿದರು. ನಂತರ ಆ ಎರಡು ಶಿಶುಗಳನ್ನು ಹೊರತೆಗೆಯಲಾಯಿತು. ಸದ್ಯ ತಾಯಿ ಮಂಜುಳಾ ಆರೋಗ್ಯ ಸ್ಥಿರವಾಗಿದೆ. ಈ ಬಗ್ಗೆ ತಂದೆ ಮಾಧ್ಯಮಗಳ ಮುಂದೆ ತಮ್ಮ ಬಡತನ ಹಾಗೂ ಕುಟುಂಬದಿಂದ ಆದಾಯ ಅನ್ಯಾದ ಬಗ್ಗೆ ಅಳಲು ತೋಡಿಕೊಂಡಿದ್ದಾನೆ.
ವೈದ್ಯಕೀಯ ವ್ಯವಸ್ಥೆಯ ನಿರ್ಲಕ್ಷ್ಯ:
ಈ ದುರಂತಕ್ಕೆ ಬಡತನ, ಅಜ್ಞಾನದ ಜೊತೆಗೆ ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆಗಳ ಕೊರತೆ ಮತ್ತು ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯವೂ ಒಂದು ಪ್ರಮುಖ ಕಾರಣ. ಆನೇಕಲ್ ವೈದ್ಯಾಧಿಕಾರಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಗರ್ಭಿಣಿ ಮಹಿಳೆಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡಿ, ಆರೈಕೆ ಮಾಡದೇ ಇರುವುದು ದುರಂತದ ತೀವ್ರತೆಯನ್ನು ಹೆಚ್ಚಿಸಿದೆ. ಈ ಘಟನೆ ವೈದ್ಯಕೀಯ ವ್ಯವಸ್ಥೆಯ ಮೇಲಿನ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ತುರ್ತಾಗಿ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಅಗತ್ಯವನ್ನು ಸಾರಿ ಹೇಳಿದೆ.
