ಬೆಂಗಳೂರು ಟ್ರಾಫಿಕ್‌ಗೆ ಹೊಸ ಮಾರ್ಗಸೂಚಿ: ವಾಹನ ಸಂಚಾರಕ್ಕೆ ನಿಯಮ ಬದಲಾವಣೆ

ಬೆಂಗಳೂರು: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಟ್ರಾಫಿಕ್ ಜಾಮ್ ಸಮಸ್ಯೆ ಜನರನ್ನು ಹೈರಾಣಾಗಿಸಿದೆ. ಈ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಇದೀಗ, ಕಾರ್ತಿಕ್ ನಗರ ಜಂಕ್ಷನ್‌ನಿಂದ ಕಲಾಮಂದಿರವರೆಗೆ ಹೊರವರ್ತುಲ ರಸ್ತೆಯಲ್ಲಿನ ಮತ್ತು ವರ್ತೂರು ಕೋಡಿಯಿಂದ ಮಾರತ್ತಹಳ್ಳಿ ಕಡೆಗೆ ಮತ್ತು ಮಾರತ್ತಹಳ್ಳಿಯಿಂದ ವರ್ತೂರು ಕೋಡಿ ಕಡೆಗೆ ತೆರಳುವ ರಸ್ತೆಯಲ್ಲಿನ ಟ್ರಾಫಿಕ್ ಕಡಿಮೆ ಮಾಡಲು ಪೊಲೀಸರು ವಾಹನ ಸಂಚಾರ ಮಾರ್ಗದಲ್ಲಿ ಕೆಲವು ಬದಲಾವಣೆ ಮಾಡಿದ್ದಾರೆ.

ವಾಹನ ಸಂಚಾರ ನಿರ್ಬಂಧಿಸಿರುವ ರಸ್ತೆ
- ಜೀವಿಕ ಆಸ್ಪತ್ರೆ ಮಾರತ್ತಹಳ್ಳಿ ಕಡೆಯ ಸರ್ವಿಸ್ ರಸ್ತೆಯಲ್ಲಿ ಕಲಾಮಂದಿರ ಕಡೆಯಿಂದ ಹೊರವರ್ತುಲ ರಸ್ತೆಗೆ ಪ್ರವೇಶಿಸುವ ಸಂಚಾರವನ್ನು ನಿರ್ಬಂಧಿಸಲಾಗಿದೆ.
- ಯಮಹಾ ಶೋ ರೂಂ ಬಳಿ ಹೊರವರ್ತುಲ ರಸ್ತೆಯಿಂದ ಸರ್ವಿಸ್ ರಸ್ತೆಗೆ ಪ್ರವೇಶಿಸುವ ಮಾರ್ಗವನ್ನು ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ
ಚಿನ್ನಪ್ಪನಹಳ್ಳಿ ರೈಲ್ವೆ ಗೇಟ್ ಕಡೆಯಿಂದ ಕಾಡುಬೀಸನಹಳ್ಳಿ ಮತ್ತು ದೇವರಬೀಸನಹಳ್ಳಿ ಕಡೆಗೆ ಸಂಚರಿಸುವ ವಾಹನಗಳು ಜೀವಿಕಾ ಆಸ್ಪತ್ರೆಯ ಸರ್ವೀಸ್ ರಸ್ತೆಯ ಮೂಲಕ ಸಂಚರಿಸಿ ಕಡ್ಡಾಯವಾಗಿ ಯಮಹಾ ಶೋ ರೂಂ ಬಳಿ ಹೊರವರ್ತುಲ ರಸ್ತೆಗೆ ಪ್ರವೇಶಿಸಿ ಸಂಚರಿಸಬೇಕು.
ಮಹದೇವಪುರ ಮತ್ತು ಕಾರ್ತಿಕನಗರ ಹೊರವರ್ತುಲ ರಸ್ತೆ ಕಡೆಯಿಂದ ವೈಟ್‌ಫೀಲ್ಡ್ / ವರ್ತೂರು ಕಡೆಗೆ ಸಂಚರಿಸುವ ವಾಹನಗಳು ಕಲಾಮಂದಿರ ಜಂಕ್ಷನ್‌ನಲ್ಲಿ ಸರ್ವಿಸ್ ರಸ್ತೆಯನ್ನು ಪ್ರವೇಶಿಸಿ. ಕುಂದಲಹಳ್ಳಿ / ವರ್ತೂರು ಕಡೆಗೆ ಸಂಚರಿಸಬಹುದಾಗಿದೆ.
ವರ್ತೂರು ಕೋಡಿ-ಮಾರತ್ತಹಳ್ಳಿ ಕಡೆಗೆ ವಾಹನ ಸಂಚಾರ ಮಾರ್ಪಾಡು
ವರ್ತೂರು ಕೋಡಿಯಿಂದ ಮಾರತ್ತಹಳ್ಳಿ ಕಡೆಗೆ ಮತ್ತು ಮಾರತ್ತಹಳ್ಳಿಯಿಂದ ವರ್ತೂರು ಕೋಡಿ ಕಡೆಗೆ ತೆರಳುವ ರಸ್ತೆಯಲ್ಲಿನ ಟ್ರಾಫಿಕ್ ಕಡಿಮೆ ಮಾಡಲು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಈ ಕೆಳಕಂಡಂತೆ ಪ್ರಾಯೋಗಿಕವಾಗಿ ಸಂಚಾರ ಮಾರ್ಪಾಡು ಮಾಡಲಾಗಿದೆ.
ಸಂಚಾರ ಮಾರ್ಪಾಡು ವಿವರ
- ವಿಬ್‌ಗಯಾರ್ “ಯು” ಟರ್ನ್ ಅನ್ನು ನಿರ್ಬಂಧಿಸಲಾಗಿದೆ.
- ಮಾರತಹಳ್ಳಿ ಮತ್ತು ಕುಂದಲಹಳ್ಳಿಯಿಂದ ವಿಬ್‌ಗಯಾರ್ ರಸ್ತೆ ಕಡೆಗೆ ಸಂಚರಿಸುವ ವಾಹನಗಳು ತೂಬರಹಳ್ಳಿ ಬಳಿ “ಯು” ಟರ್ನ್ ಪಡೆದು ಸಂಚರಿಸಬಹುದಾಗಿದೆ.
