ನ. 18 ರಿಂದ ಬೆಂಗಳೂರು ಟೆಕ್ ಶೃಂಗಸಭೆ 2025: AI ಮತ್ತು ಡೀಪ್ ಟೆಕ್‌ಗೆ ಹೆಚ್ಚಿನ ಆದ್ಯತೆ; 60 ರಾಷ್ಟ್ರಗಳಿಂದ 50 ಸಾವಿರಕ್ಕೂ ಹೆಚ್ಚು ವೀಕ್ಷಕರು ಭಾಗಿ

ಬೆಂಗಳೂರು: 28ನೇ ಆವೃತ್ತಿಯ ಬೆಂಗಳೂರು ಟೆಕ್ ಶೃಂಗಸಭೆ (Bengaluru Tech Summit 2025) ನವೆಂಬರ್ 18 ರಿಂದ 20 ರವರೆಗೆ ಇಂಟರ್‌ನ್ಯಾಶನಲ್ ಎಕ್ಸಿಬಿಷನ್ ಸೆಂಟರ್‌ನಲ್ಲಿ (BIEC) ನಡೆಯಲಿದೆ.

ವಿಧಾನಸೌಧದಲ್ಲಿ ಈ ಟೆಕ್ ಶೃಂಗಸಭೆಯ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, 500ಕ್ಕೂ ಹೆಚ್ಚು ಭಾಷಣಕಾರರು, 20 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು,1 ಸಾವಿರಕ್ಕೂ ಹೆಚ್ಚು ಪ್ರದರ್ಶಕರು 60 ರಾಷ್ಟ್ರಗಳಿಂದ 50 ಸಾವಿರಕ್ಕೂ ಹೆಚ್ಚು ವೀಕ್ಷಕರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ನವೆಂಬರ್ 20 ರಂದು ಫ್ಯೂಚರ್ ಮೇಕರ್ಸ್ ಕಾಂಕ್ಲೇವ್ ನಡೆಯಲಿದ್ದು,10 ಸಾವಿರಕ್ಕೂ ಉದ್ಯಮಿಗಳು, ಹೂಡಿಕೆದಾರರು,ಸ್ಟಾರ್ಟ್ ಅಪ್ ಸಂಸ್ಥಾಪಕರು ಮತ್ತು ಆವಿಷ್ಕಾರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈ ಬಾರಿಯ ಟೆಕ್ ಸಮಿಟ್‌ನಲ್ಲಿ ಡೀಪ್ ಟೆಕ್ ಮತ್ತು AI ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕರ್ನಾಟಕವನ್ನು ಭಾರತದ ಡೀಪ್ ಟೆಕ್ ರಾಜಧಾನಿಯಾಗಿ ರೂಪಿಸುವ ಉದ್ದೇಶದಿಂದ ಸರ್ಕಾರ 600 ಕೋಟಿ ರೂ. ಹೂಡಿಕೆಗೆ ಬದ್ಧವಾಗಿದೆ. ಇದರಲ್ಲಿ ಎಐ, ಮಷೀನ್ ಲರ್ನಿಂಗ್, ಕ್ವಾಂಟಮ್ ಕಂಪ್ಯೂಟಿಂಗ್, ರೋಬೋಟಿಕ್ಸ್ ಹಾಗೂ ಸಸ್ಟೇನಬಿಲಿಟಿ ಆಧಾರಿತ ಆವಿಷ್ಕಾರಗಳಿಗೂ ಪ್ರೋತ್ಸಾಹ ನೀಡಲಾಗುತ್ತದೆ ಎಂದು ವಿವರಿಸಿದರು.
ಸರ್ಕಾರವು ಮುಂದಿನ ದಿನಗಳಲ್ಲಿ ವೆಂಚರ್ ಕ್ಯಾಪಿಟಲ್ ಸಂಸ್ಥೆಗಳ ಸಹಕಾರದೊಂದಿಗೆ ಈ ನಿಧಿಯನ್ನು 1,000 ಕೋಟಿ ರೂ.ಗೆ ವಿಸ್ತರಿಸಲು ಯೋಜಿಸಿದೆ. 150 ಕೋಟಿ ರೂ.– ಡೀಪ್ ಟೆಕ್ ಎಲೆವೇಟ್ ಫಂಡ್, 80 ಕೋಟಿ ರೂ. ಎಲೆವೇಟ್ ಬಿಯಾಂಡ್ ಬೆಂಗಳೂರು ಫಂಡ್,75 ಕೋಟಿ ರೂ. ಕಿಟ್ವಿನ್ ಫಂಡ್ ಮೂಲಕ ಡೀಪ್ ಟೆಕ್ ಮತ್ತು ಎಐ ಸ್ಟಾರ್ಟ್‌ಅಪ್‌ಗಳಿಗೆ ಈಕ್ವಿಟಿ ಹೂಡಿಕೆ, 48 ಕೋಟಿ ರೂ. – ಐಐಟಿ ಮತ್ತು ಐಐಐಟಿ ಧಾರವಾಡ ಹಾಗೂ ಕಲಬುರಗಿಯಲ್ಲಿ ಹೊಸ ಇಂಕ್ಯೂಬೇಟರ್‌ಗಳಿಗೆ 110 ಕೋಟಿ ರೂ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬಿಸಿನೆಸ್ ಇಂಕ್ಯೂಬೇಟರ್ ಸ್ಥಾಪನೆಗೆ ಮೀಸಲಿಡಲಾಗಿದೆ ಎಂದು ತಿಳಿಸಿದರು.