ಬೆಂಗಳೂರು ದರೋಡೆ ಪ್ರಕರಣ: ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಿ ₹1.5 ಕೋಟಿ ದೋಚಿದ ಖದೀಮರು

ಬೆಂಗಳೂರಿನಲ್ಲಿ ಮತ್ತೆ ರಾಬರಿ ನಡೆದಿದೆ. ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಿದ ಖದೀಮರು 1.5 ಕೋಟಿ ರೂ ನಗದು ಹಣವನ್ನು ದೋಚಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿ ಈ ಘಟನೆ ನಡೆದಿದ್ದು, ಇದೀಗ ಜನರನ್ನು ಬೆಚ್ಚಿ ಬೀಳಿಸಿದೆ. ಒಟ್ಟು ನಾಲ್ಕು ಮಂದಿ ಮನೆಗೆ ನುಗ್ಗಿ ರಾಬರಿ ಮಾಡಿದ್ದಾರೆ. ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಇನ್ನೋವಾ ಕಾರಿನಲ್ಲಿ ಬಂದಿದ್ದ ನಾಲ್ವರು ಆರೋಪಿಗಳು ನಾವು ಸರ್ಕಾರಿ ಅಧಿಕಾರಿಗಳು ನಿಮ್ಮ ಮನೆ ಸರ್ಚ್ ಮಾಡಲು ಬಂದಿದ್ದೇವೆ. ಹಣ ಎಲ್ಲಿಟ್ಟೀದ್ದಿರಿ ಎಂದು ಕೇಳಿದ್ದಾರೆ. ಹೆದರಿದ ಮನೆಮಂದಿ ಹಣ ಇರುವುದನ್ನು ಹೇಳಿದ್ದಾರೆ.

ಅಡುಗೆ ಮನೆಯಲ್ಲಿ ಬ್ಯಾಗ್ ನಲ್ಲಿದ್ದ ಹಣ
ಗಿರಿರಾಜು ಎಂಬುವವರ ಮನೆಯಲ್ಲಿ ನಡೆದಿರುವ ರಾಬರಿ ಪ್ರಕರಣ ಈಗ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಸರ್ಕಾರಿ ಅಧಿಕಾರಿಗಳು ಎಂದು ಹೇಳಿಕೊಂಡು ಮನೆಗೆ ಬಂದಿದ್ದು, ನಿಮ್ಮ ಮನೆಯಲ್ಲಿ ಹಣ ಇದೆ ಎಂದಿದ್ದಾರೆ. ಅದಾದ ನಂತರ ನಿಮ್ಮ ಮನೆಯಲ್ಲಿ ಹಣ ಎಲ್ಲಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಗಿರಿರಾಜು ಅಡುಗೆ ಮನೆಯಲ್ಲಿ ಬ್ಯಾಗ್ ನಲ್ಲಿ ಹಣ ಇಟ್ಟಿದ್ದರು. ಜಮೀನು ಖರೀದಿಗಾಗಿ ಹಣ ತಂದು ಇಟ್ಟುಕೊಂಡಿದ್ದರು. ನಂತ್ರ ಮನೆ ಮಾಲೀಕ ಗಿರಿರಾಜು ಎಲ್ಲಿದ್ದಾರೆ ಎಂದಿದ್ದಾರೆ. ಅವರು ಇಲ್ಲಾ ಎಂದಾಗ ಹಣದ ಬ್ಯಾಗ್ ಅನ್ನು ತೆಗೆದುಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ.
ಲೆಕ್ಚರರ್ ಮನೆಯಿಂದ ದರೋಡೆ
ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಒಟ್ಟು 1.5 ಕೋಟಿ ನಗದು 50 ಗ್ರಾಂ ಚಿನ್ನದ ಆಭರಣ ದೋಚಿರುವ ಗ್ಯಾಂಗ್ , ಘಟನೆ ಬಳಿಕ ಸಿಸಿಟಿವಿ ಪರಿಶೀಲನೆ ನಡೆಸುತ್ತಿರುವ ಯಲಹಂಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೇ ತಿಂಗಳ 19 ನೇ ತಾರೀಖು ಈ ಕೃತ್ಯ ನಡೆದಿದೆ. ಬೆಳಗ್ಗೆ 7.45 ಸುಮಾರಿಗೆ ಬಂದು ದೋಚಿದ್ದಾರೆ. ಗಿರಿರಾಜ್ ಸಿಂಧಿ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದರು. ಬೆಳಗ್ಗೆ ಮನೆಗೆ ನುಗ್ಗಿ ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಬಂದ ನಾಲ್ವರು ಕಿಡಿಗೇಡಿಗಳು ತಿಳಿದೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.
