ಚಿತ್ರಮಂದಿರದ ಮಹಿಳಾ ಶೌಚಾಲಯದಲ್ಲಿ ಗುಪ್ತ ಕ್ಯಾಮರಾ: ಯುವತಿಯರ ಖಾಸಗಿ ವಿಡಿಯೋ ಚಿತ್ರೀಕರಿಸುತ್ತಿದ್ದ ಸಿಬ್ಬಂದಿ ಬಂಧನ!

ಬೆಂಗಳೂರು: ಬೆಂಗಳೂರಿನ ಮಡಿವಾಳದ ವಿ.ಪಿ. ರಸ್ತೆಯಲ್ಲಿರುವ ಸಂಧ್ಯಾ ಥಿಯೇಟರ್‌ನಲ್ಲಿ ಮಹಿಳಾ ಟೆಕ್ಕಿ ಮತ್ತು ಅವರ ಸ್ನೇಹಿತೆಯರ ಖಾಸಗಿ ವಿಡಿಯೋ ಚಿತ್ರೀಕರಿಸುತ್ತಿದ್ದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ರವಿವಾರ ರಾತ್ರಿ “ನೂವು ನಾಕು ನಚ್ಚಾವು” ಸಿನಿಮಾ ವೀಕ್ಷಿಸಲು ತೆರಳಿದ್ದ ಮಹಿಳಾ ಟೆಕ್ಕಿ, ವಿರಾಮದ ಸಮಯದಲ್ಲಿ ಶೌಚಾಲಯಕ್ಕೆ ಹೋದಾಗ ಅಲ್ಲಿ ರಾಜೇಶ್ ಎಂಬಾತ ಮೊಬೈಲ್ ಮೂಲಕ ವಿಡಿಯೋ ಮಾಡುತ್ತಿರುವುದನ್ನು ಕಂಡು ತಕ್ಷಣ ಆತನನ್ನು ಹಿಡಿದಿದ್ದಾರೆ.


ಆತನ ಮೊಬೈಲ್ ಪರಿಶೀಲಿಸಿದಾಗ ದೂರುದಾರೆ ಮತ್ತು ಅವರ ಸ್ನೇಹಿತೆಯರ ದೃಶ್ಯಗಳು ಪತ್ತೆಯಾಗಿದ್ದು, ಕೂಡಲೇ 112 ಪೊಲೀಸ್ ಹೆಲ್ಪ್‌ಲೈನ್‌ಗೆ ಕರೆ ಮಾಡಿ ಆರೋಪಿಯನ್ನು ಪೊಲೀಸರಿಗೊಪ್ಪಿಸಲಾಗಿದೆ.

ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಸಿಬ್ಬಂದಿಗಳಾದ ರಾಜೇಶ್ ಮತ್ತು ಕಮಲ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯ ವೇಳೆ, ಕಮಲ್ ಎಂಬಾತನ ಸೂಚನೆಯ ಮೇರೆಗೆ ತಾನು ವಿಡಿಯೋ ಮಾಡುತ್ತಿದ್ದಾಗಿ ರಾಜೇಶ್ ಒಪ್ಪಿಕೊಂಡಿದ್ದಾನೆ. ಆತನ ಮೊಬೈಲ್‌ನಲ್ಲಿ ಕಳೆದ ಒಂದು ತಿಂಗಳಿನಿಂದ ಚಿತ್ರೀಕರಿಸಲಾದ ಹಲವಾರು ಯುವತಿಯರ ಖಾಸಗಿ ವಿಡಿಯೋಗಳು ಪತ್ತೆಯಾಗಿದ್ದು, ಇದು ವ್ಯವಸ್ಥಿತವಾಗಿ ನಡೆಯುತ್ತಿದ್ದ ಕೃತ್ಯ ಎಂಬ ಶಂಕೆ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಥಿಯೇಟರ್ ಆಡಳಿತ ಮಂಡಳಿಯ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ರೆಡ್ಮಿ ಮೊಬೈಲ್ ಫೋನ್ ವಶಪಡಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
