ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕಳ್ಳರ ಹಾಟ್‌ಸ್ಪಾಟ್: ಅವೈಜ್ಞಾನಿಕ ಕಾಮಗಾರಿಯಿಂದ ಹೆಚ್ಚಿದ ದರೋಡೆ-ಕಳ್ಳತನ

ರಾಮನಗರ: ಬೆಂಗಳೂರು-ಮೈಸೂರು ನಡುವಿನ ಪ್ರಯಾಣದ ಸಮಯವನ್ನು ಕಡಿಮೆಗೊಳಿಸುವ ಮತ್ತು ಸುಗಮ ಸಂಚಾರದ ಉದ್ದೇಶದಿಂದ ನಿರ್ಮಿಸಲಾಗಿರುವ ಎಕ್ಸ್‌ಪ್ರೆಸ್ ವೇ ಸದಾ ಒಂದಿಲ್ಲೊಂದು ವಿಚಾರಗಳಿಗೆ ಆರಂಭದಿಂದಲೂ ಸುದ್ದಿಯಾಗುತ್ತಲೇ ಇದೆ. 118 ಕಿ.ಮೀ ಉದ್ದ ಮತ್ತು 6 ಪಥದ ಹೆದ್ದಾರಿಯಲ್ಲಿ ಮೇಲಿಂದ ಮೇಲೆ ಅಪಘಾತಗಳು ನಡೆಯುತ್ತಿರುವ ಸುದ್ದಿಯ ನಡುವೆ ಅಪರಾಧಗಳೂ ಹೆಚ್ಚಿರೋದು ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ.

ಒಟ್ಟು 8,479 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕದ ಮೊದಲ ಎಕ್ಸ್‌ಪ್ರೆಸ್ ಹೈವೇ ನಿರ್ಮಾಣವಾಗಿದ್ದು, ಇದನ್ನು ಎರಡೂವರೆ ವರ್ಷಗಳ ಹಿಂದೆ ಮಂಡ್ಯ ತಾಲೂಕಿನ ಹನಕೆರೆ ಗ್ರಾಮದ ಬಳಿ ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಈ ರಸ್ತೆಯೀಗ ಕಳ್ಳರ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ. ಸರ್ವೀಸ್ ರಸ್ತೆಯಲ್ಲಿ ದರೋಡೆ, ಕಳ್ಳತನ ಪ್ರಕರಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ರಾತ್ರಿ ವೇಳೆ ಬೈಕ್ನಲ್ಲಿ ಬರುವ, ಹೆದ್ದಾರಿ ಪಕ್ಕದಲ್ಲಿ ವಾಹನ ನಿಲ್ಲಿಸಿ ನಿದ್ರೆ ಮಾಡುವವರನ್ನೇ ಟಾರ್ಗೆಟ್ ಮಾಡಿ ಕಳ್ಳತನ, ದರೋಡೆ ಮಾಡುವ ಕೆಲಸಗಳು ವರದಿಯಾಗಿವೆ. ಇತ್ತೀಚೆಗೆ ತಮಿಳುನಾಡು ಪೊಲೀಸರನ್ನೇ ಇಲ್ಲಿ ಕಳ್ಳರು ದೋಚಿದ್ದಾರೆ ಎಂಬುದು ಸ್ಥಳೀಯರ ಆರೋಪ.
ಅವೈಜ್ಞಾನಿಕ ಕಾಮಗಾರಿಯಿಂದ ಸಮಸ್ಯೆ
ಅಲ್ಲದೆ ರಸ್ತೆ ಉದ್ಘಾಟನೆಗೊಂಡು ಎರಡೂವರೆ ವರ್ಷಗಳು ಕಳೆದರೂ ಹೆದ್ದಾರಿಯ ಸರ್ವೀಸ್ ರಸ್ತೆಯ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ನಡೆದಿರುವ ಕಾಮಗಾರಿಯೂ ಅವೈಜ್ಞಾನಿಕವಾಗಿದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಇರಬೇಕಿದ್ದ ಸಿಸಿ ಕ್ಯಾಮರಾಗಳನ್ನು ಕೂಡ ಅಳವಡಿಸಲಾಗಿಲ್ಲ. ಬೀದಿ ದೀಪಗಳು ಇಲ್ಲದಿರುವ ಜೊತೆಗೆ, ಪೊಲೀಸರ ಗಸ್ತು ಕೂಡ ಇಲ್ಲದೇ ಇರುವುದು ಕಳ್ಳರಿಗೆ ವರದಾನವಾಗಿದೆ. ಇದನ್ನೇ ಬಂಡವಾಳಮಾಡಿಕೊಂಡು ಪ್ರಯಾಣಿಕರ ಸುಲಿಗೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.