ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಕಾರುಗಳ ನಡುವೆ ಭೀಕರ ಅಪಘಾತ – 2 ಸಾವನ್ನಪ್ಪಿ 4 ಗಂಭೀರ ಗಾಯ

ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಕಾರುಗಳ ನಡುವೆ ಭೀಕರ ಅಪಘಾತ ಉಂಟಾದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಂಭೀರ ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆ ಮದ್ದೂರಿನ ನಿಡಘಟ್ಟ ಬಳಿ ನಡೆದಿದೆ.

ಅಪಘಾತದಲ್ಲಿ ಮಸೂದ್ ಹಾಗೂ ಅಯಾನ್ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಖುಷಿ, ಚಿಕ್ಕು, ಮುಜಾಯಿದ್ ಪಾಷ, ಬಸವರಾಜು, ಪಾರ್ವತಿ ಗಂಭೀರ ಗಾಯಗೊಂಡಿದ್ದಾರೆ. ಬೆಂಗಳೂರಿನ ಕಡೆಯಿಂದ ಬರುತ್ತಿದ್ದ ಕಾರು ಡಿವೈಡರ್ ದಾಟಿ ಮಂಡ್ಯದ ಕಡೆಯಿಂದ ಬರುತ್ತಿದ್ದ ಎರಡು ಕಾರುಗಳಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಭಾನುವಾರ ತಡರಾತ್ರಿ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ಹೈವೇ ರಸ್ತೆಯನ್ನು ಬಂದ್ ಮಾಡಿ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಘಟನೆಯಲ್ಲಿ ಗಾಯಗೊಂಡ ಕೆಲವರಿಗೆ ಬೆಂಗಳೂರು ಹಾಗೂ ಇನ್ನೂ ಕೆಲವರಿಗೆ ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
