ಎಣ್ಣೆ ಪಾರ್ಟಿ ನಂತರ ಹತ್ಯೆ: ಸ್ನೇಹಿತನ ತಲೆಗೆ ಕಲ್ಲು ಎತ್ತಿಹಾಕಿ ಕೊಂದ ಆರೋಪಿ ಪರಾರಿ

ಬೆಂಗಳೂರು: ಕುಡಿದ ಅಮಲಿನಲ್ಲಿ ಸ್ನೇಹಿತ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಬೆಂಗಳೂರು ನಗರದ ಪೀಣ್ಯ ಬಳಿ ನಡೆದಿದೆ. ರಂಗನಾಥ್ (44 ವರ್ಷ) ಕೊಲೆಯಾದ ವ್ಯಕ್ತಿ. ರಂಗನಾಥ್ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯವರು. ಬೆಂಗಳೂರಿನ ನೆಲಗದರನಹಳ್ಳಿಯಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದರು. ರಂಗನಾಥ್ ಟೆಂಪೋ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದರು. ಗುರುವಾರ (ಜು.17) ರಾತ್ರಿ ರಂಗನಾಥ್, ಸ್ನೇಹಿತ ಆನಂದ್ನೊಂದಿಗೆ ಎಣ್ಣೆ ಪಾರ್ಟಿ ಮಾಡಿದ್ದಾರೆ. ನಂತರ ಇಬ್ಬರ ನಡುವೆ ಜಗಳವಾಗಿದೆ. ಜಗಳ ತಾರಕಕ್ಕೇರಿದ್ದು, ಆನಂದ್ ಸ್ನೇಹಿತ ರಂಗನಾಥ್ನ ತಲೆಗೆ 15 ನಿಮಿಷಗಳ ಕಾಲ ಕಲ್ಲಿನಿಂದ ಜಜ್ಜಿದ್ದಾನೆ. ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ವಿಚಾರ ತಿಳಿದು ಪೀಣ್ಯಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರು ಆರೋಪಿ ಪತ್ತೆಗೆ ಬಲೆಬೀಸಿದ್ದಾರೆ.

