‘ಬೆಂಗಳೂರು ಫುಟ್‌ಪಾತ್‌ಗಳು ಡಂಪಿಂಗ್ ಸ್ಪಾಟ್‌ಗಳಾಗಿವೆ’: HSR ಲೇಔಟ್‌ನ ದುಸ್ಥಿತಿ ವಿವರಿಸಿದ ಕೆನಡಾ ಪ್ರಜೆಯ ವಿಡಿಯೋ ವೈರಲ್!

ಬೆಂಗಳೂರು: ಸಾಮಾನ್ಯವಾಗಿ ಬೆಂಗಳೂರಿನಲ್ಲಿ (Bengaluru) ಕೆಲ ರಸ್ತೆಗಳಲ್ಲಿ ಹಾಗೂ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುವುದು ಸವಾಲಿನ ಸಂಗತಿ. ಇಲ್ಲಿನ ರಸ್ತೆ ಗುಂಡಿಗಳು, ತೀರಾ ಹದಗೆಟ್ಟಿರುವ ಪಾದಚಾರಿಗಳು ನಡೆದುಕೊಂಡು ಹೋಗಲು ಸಾಧ್ಯವಾಗದ ಫುಟ್‌ಪಾತ್‌ಗಳಿವೆ. ಈ ಬಗ್ಗೆ ವಿದೇಶಿ ಪ್ರಜೆಯೊಬ್ಬರು ಗಮನ ಹರಿಸಿದ್ದಾರೆ. ಹೌದು ಕಳೆದ ಎಂಟು ವರ್ಷಗಳಿಂದ ಭಾರತದಲ್ಲಿ ನೆಲೆಸಿರುವ ಕೆನಡಾದ ಪ್ರಜೆ ಕ್ಯಾಲೆಬ್ ಫ್ರೈಸೆನ್ ಅವರು ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್‌ನಲ್ಲಿ (HSR Layout) ಪಾದಚಾರಿ ಮಾರ್ಗಗಳು ಡಂಪಿಂಗ್ ಸ್ಪಾಟ್‌ಗಳಾಗಿವೆ ಎಂದು ಇಲ್ಲಿನ ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾರೆ. ಕಸದ ರಾಶಿಯಿಂದ ತುಂಬಿಕೊಂಡಿರುವ ಈ ಪಾದಚಾರಿ ಮಾರ್ಗ ಹೇಗಿದೆ ಎಂದು ಹೇಳಿರುವ ವಿಡಿಯೋ ಸದ್ಯ ವೈರಲ್ ಆಗಿದೆ.

ಕ್ಯಾಲೆಬ್ (Caleb) ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ “ನಾನು ಇತ್ತೀಚೆಗೆ ಹೆಚ್‌ಆರ್‌ಎಸ್ ಲೇಔಟ್‌ನಲ್ಲಿ ನಡೆದುಕೊಂಡು ಹೋದೆ. ನಾನು ಅರಿತುಕೊಂಡದ್ದು ಇಲ್ಲಿದೆ: ಅತಿಕ್ರಮಣದಿಂದಾಗಿ ಫುಟ್‌ಪಾತ್‌ಗಳು ಪ್ರವೇಶಿಸಲಾಗುವುದಿಲ್ಲ. ಪ್ರವೇಶಿಸಲಾಗದ ಫುಟ್‌ಪಾತ್‌ಗಳನ್ನು ನಿರ್ವಹಿಸಲಾಗುವುದಿಲ್ಲ. ನಿರ್ವಹಿಸದ ಫುಟ್‌ಪಾತ್‌ಗಳು ಡಂಪಿಂಗ್ ಸ್ಪಾಟ್‌ಗಳಾಗುತ್ತವೆ. ಡಂಪಿಂಗ್ ಸ್ಪಾಟ್‌ಗಳು ಶೌಚಾಲಯಗಳಾಗುತ್ತವೆ. ಇದೆಲ್ಲವೂ ಅತಿಕ್ರಮಣದಿಂದ ಪ್ರಾರಂಭವಾಗುತ್ತದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಈ ವಿಡಿಯೋದಲ್ಲಿ ವಿದೇಶಿಗ ಬೆಂಗಳೂರಿನ ಹೆಚ್ ಆರ್ ಲೇಔಟ್ ನಲ್ಲಿ ಪಾದಚಾರಿ ಮಾರ್ಗಗಳು ಎಷ್ಟು ಕಳಪೆಯಾಗಿದೆ ಎಂದು ತೋರಿಸಿರುವುದನ್ನು ಕಾಣಬಹುದು. ಅಸ್ತವ್ಯಸ್ತವಾದ ಪಾದಚಾರಿ ಮಾರ್ಗಗಳು ಕಸದ ರಾಶಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳ ಅತಿಕ್ರಮಣಗಳು ಪಾದಚಾರಿಗಳಿಗೆ ಫುಟ್ ಪಾತ್ ನಲ್ಲಿ ನಡೆದುಕೊಂಡು ಹೋಗಲು ಕಷ್ಟವಾಗುತ್ತಿರುವುದನ್ನು ವಿದೇಶಿಗ ತೋರಿಸಿದ್ದಾರೆ.
ನವೆಂಬರ್ 4 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಇದುವರೆಗೆ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಹೆಚ್ ಆರ್ ಎಸ್ ಲೇಔಟ್‌ನಲ್ಲಿ ಮಾತ್ರವಲ್ಲದೆ ನಗರದಾದ್ಯಂತ ಇಂತಹ ಪರಿಸ್ಥಿತಿಗಳು ಸಾಮಾನ್ಯವಾಗಿದೆ ಎಂದಿದ್ದಾರೆ. ಇನ್ನೊಬ್ಬರು ಫುಟ್ ಪಾತ್ ಗಳು ಆಹಾರ ಮಳಿಗೆಗಳಿಗೆ ಮಾತ್ರ ಎಂದು ಹೇಳಿದ್ದಾರೆ. ಮತ್ತೊಬ್ಬರು ಬೆಂಗಳೂರಿನಲ್ಲಿ ಈ ಸಮಸ್ಯೆ ಭಾರಿ ಜಟಿಲವಾಗಿದೆ. ಕೈ ತುಂಬಾ ಹಣದೊಂದಿಗೆ ಕುಳಿತಿರುವ ಪ್ರಭುಗಳು ಇಲ್ಲಿ ಇದ್ದಾರೆ. ಕೆಲವರಿಗೆ ಇದು ಆದಾಯದ ಮೂಲವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.