ಬೆಂಗಳೂರು: ಕೋಟಿ ರೂ. ಚಿನ್ನಾಭರಣ, ನಗದು ಕದ್ದ ಕೇರ್‌ಟೇಕರ್ ಮಹಿಳೆ ಬಂಧನ

ಬೆಂಗಳೂರು: ಚಾಮರಾಜಪೇಟೆಯಲ್ಲಿ ₹1.57 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ಕದ್ದ ಕೇರ್‌ಟೇಕರ್ ಮಹಿಳೆಯನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಉಮಾ, ಚಾಮರಾಜಪೇಟೆಯ ಕೇರ್‌ಟೇಕರ್ ಆಗಿ ಕೆಲಸ ಮಾಡುತ್ತಿದ್ದವಳು.

ಚಾಮರಾಜಪೇಟೆಯ ಉದ್ಯಮಿ ರಾಧ ಅವರು ಕೂಡು ಕುಟುಂಬದಲ್ಲಿ ವಾಸಿಸುತ್ತಿದ್ದರು.
ಅವರು ನಗರ್ತಪೇಟೆಯಲ್ಲಿ ಸ್ವಂತ ಸೆಕ್ಯೂರಿಟಿ ಏಜೆನ್ಸಿಯನ್ನು ನಡೆಸುತ್ತಿದ್ದಾರೆ. ರಾಧಾ ಅವರ ಅಕ್ಕ ಸುಜಾತ ಅವರು ಕಳೆದ 8 ತಿಂಗಳಿಂದ ಅನಾರೋಗ್ಯದಿಂದ ಬೆಡ್‌ರಿಡನ್ ಆಗಿದ್ದರಿಂದ, ಅವರನ್ನು ನೋಡಿಕೊಳ್ಳಲು ಕೇರ್‌ಟೇಕರ್ ನೇಮಕ ಮಾಡಲಾಗಿತ್ತು. ಕಳೆದ 3 ತಿಂಗಳ ಹಿಂದೆ ಏಜೆನ್ಸಿ ಮೂಲಕ ಉಮಾ ಎಂಬ ಮಹಿಳೆ ಕೇರ್‌ಟೇಕರ್ ಆಗಿ ಕೆಲಸಕ್ಕೆ ಸೇರಿದ್ದಳು.
ರಾಧಾ ಅವರ ಮನೆಯ ಬೀರುವಿನಲ್ಲಿ ಸುಜಾತ ಅವರು ಸೈಟ್ ಮಾರಾಟದಿಂದ ಬಂದ ₹67 ಲಕ್ಷ ನಗದು ಹಾಗೂ ₹95 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಇರಿಸಲಾಗಿತ್ತು. ಜೂನ್ 9ರಂದು ರಾಧಾ ಬೀರು ತೆರೆದು ಪರಿಶೀಲಿಸಿದಾಗ ಹಣ ಮತ್ತು ಆಭರಣಗಳು ಕಾಣೆಯಾಗಿದ್ದವು.
ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಜೂನ್ 4ರ ಬೆಳಗ್ಗೆ ಉಮಾ ಒಂದು ಬ್ಯಾಗ್‌ನೊಂದಿಗೆ ಮನೆಯಿಂದ ಹೊರಗೆ ಹೋಗಿರುವುದು ಮತ್ತು ಸಂಜೆ 6:30ಕ್ಕೆ ವಾಪಸ್ ಬಂದಿರುವ ದೃಶ್ಯ ಸೆರೆಯಾಗಿತ್ತು. ರಾಧಾ ಅವರು ಉಮಾಳನ್ನು ಪ್ರಶ್ನಿಸಿದಾಗ, ತನಗೆ ಏನೂ ಗೊತ್ತಿಲ್ಲ ಎಂದು ಉತ್ತರಿಸಿದ್ದಳು. ಆದರೆ, ಶಂಕೆಗೀಡಾದ ರಾಧಾ, ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಪೊಲೀಸರು ಉಮಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆಕೆ ಕೃತ್ಯವನ್ನು ಒಪ್ಪಿಕೊಂಡಳು. ಉಮಾ ತನ್ನ ಮಗಳ ಮನೆಯಲ್ಲಿ ಇರಿಸಿದ್ದ ಸುಮಾರು ₹60 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನುಳಿದ ಹಣ ಮತ್ತು ಆಭರಣಗಳ ಬಗ್ಗೆ ತನಿಖೆ ಮುಂದುವರಿದಿದೆ. ಚಾಮರಾಜಪೇಟೆ ಪೊಲೀಸರು ಉಮಾಳನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2025ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಸಿನಿಮಾ, ಕ್ರೀಡೆ ಸೇರಿದಂತೆ ಎಲ್ಲ ವಿಭಾಗದ ಸುದ್ದಿಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ, ಡಿಪ್ಲೋಮಾ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿಯಿದೆ.