ಬೆಂಗಳೂರು ಏರ್‌ಪೋರ್ಟ್: ಪ್ರಯಾಣಿಕರ ಬ್ಯಾಗ್‌ನಿಂದ ಕೋಟ್ಯಂತರ ಮೌಲ್ಯದ ಚಿನ್ನ, ವಜ್ರ ಕಳವು!

ಚಿಕ್ಕಬಳ್ಳಾಪುರ: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೆರಿಕಗೆ ಪ್ರಯಾಣ ಬೆಳೆಸುತ್ತಿದ್ದ ಮಹಿಳೆಯ ಲಗೇಜ್ ಬ್ಯಾಗ್ ನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ, ವಜ್ರಾಭರಣ (Gold, Diamonds Jewellery) ಕಳುವಾಗಿರುವ ಸಂಬಂಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಂದಹಾಗೆ ಹುಬ್ಬಳ್ಳಿ (Hubballi) ಮೂಲದ ಶಾಂತಾ ರಮೇಶ್ ಕಾಶಿ ಕೌಂಟಿ ಎಂಬುವವರು ಕುಟುಂಬ ಸಮೇತ ಅಮೆರಿಕದಲ್ಲಿ ನೆಲೆಸಿದ್ದು ಕಳೆದ ಆಗಸ್ಟ್ ನಲ್ಲಿ ಹುಬ್ಬಳ್ಳಿಗೆ ಆಗಮಿಸಿದ್ದರು. ಮರಳಿ ನವೆಂಬರ್ ನಲ್ಲಿ ವಾಪಸ್ ಅಮೆರಿಕಗೆ ತೆರಳುವ ಸಲುವಾಗಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈನ ಅಬುದಾಬಿಗೆ ಪ್ರಯಾಣ ಬೆಳೆಸಿದ್ದಾರೆ.

ಪ್ರಯಾಣದ ಸಮಯದಲ್ಲಿ ಲಗೇಜ್ ಬ್ಯಾಗ್ ನಲ್ಲಿ ಸರಿಸುಮಾರು 790 ಗ್ರಾಂ ಚಿನ್ನಾಭರಣ ಹಾಗೂ 8 ಲಕ್ಷ ಮೌಲ್ಯದ ವಜ್ರಾವರಣಗಳನ್ನ ಇಟ್ಟಿದ್ದರು. ಬೆಂಗಳೂರಿಂದ ಪ್ರಯಾಣ ಬೆಳೆಸಿದ ಮಹಿಳೆ ಅಬುದಾಬಿಯಲ್ಲಿ ಲಗೇಜ್ ಬ್ಯಾಗ್ ಕಲೆಕ್ಟ್ ಮಾಡಿಕೊಂಡಾಗ ಬ್ಯಾಗಿನಲ್ಲಿ ಒಡವೆಗಳು ಇಲ್ಲದಿರುವುದು ಕಂಡುಬಂದಿದೆ.
ಹೀಗಾಗಿ ಜನವರಿಯಲ್ಲಿ ಮತ್ತೆ ಬೆಂಗಳೂರಿಗೆ ವಾಪಸ್ ಆಗಿರುವ ಮಹಿಳೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಚಿನ್ನಾಭರಣ ಕಳುವಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.