ಬಂಗಾಳಿ ನಟ ರಾಹುಲ್ ಅರುಣೋದಯ ಬ್ಯಾನರ್ಜಿ ನೀರಿನಲ್ಲಿ ಮುಳುಗಿ ದಾರುಣ ಅಂತ್ಯ

ಕೊಲ್ಕತ್ತಾ: ಖ್ಯಾತ ಬಂಗಾಳಿ ನಟ ರಾಹುಲ್ ಅರುಣೋದಯ ಬ್ಯಾನರ್ಜಿ ಅವರು ರವಿವಾರ (ಮಾರ್ಚ್ 29) ಒಡಿಶಾ- ಪಶ್ಚಿಮ ಬಂಗಾಳ ಗಡಿಯ ದಿಘಾ ಸಮೀಪದ ತಲ್ಪರಿ ಎಂಬಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅವರಿಗೆ 43 ವರ್ಷ ವಯಸ್ಸಾಗಿತ್ತು. ಬಂಗಾಳಿ ಧಾರಾವಾಹಿಯ ಶೂಟಿಂಗ್ ಗಾಗಿ ಬ್ಯಾನರ್ಜಿ ತೆರಳಿದ್ದರು.
ರವಿವಾರ ಬೆಳಿಗ್ಗೆ ‘ಭೋಲ್ ಬಾಬಾ ಪಾರ್ ಕರೇಗಾ’ ಎಂಬ ಧಾರಾವಾಹಿಯ ಶೂಟಿಂಗ್ ನಡೆದಿತ್ತು. ಮಧ್ಯಾಹ್ನ ಬಳಿಕ ಚಿತ್ರೀಕರಣ ತಂಡ ಪ್ಯಾಕಪ್ ಮಾಡಿದ ಬಳಿಕ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಶೂಟಿಂಗ್ ಮುಗಿದ ಬಳಿಕ ಆಳ ಸಮುದ್ರ ನೀರಿಗೆ ಬ್ಯಾನರ್ಜಿ ಏಕಾಂಗಿಯಾಗಿ ಇಳಿದರು ಎನ್ನಲಾಗಿದೆ. ಅವರು ನಾಪತ್ತೆಯಾದ ತಕ್ಷಣವೇ ನಿರ್ಮಾಣ ಘಟಕದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಈ ದುರಂತಕ್ಕೆ ಇಡೀ ತಂಡ ಸಾಕ್ಷಿಯಾಯಿತು ಎನ್ನಲಾಗಿದೆ.
ತಂತ್ರಜ್ಞರು ಮತ್ತು ನಿರ್ಮಾಣ ತಂಡದ ಸಿಬ್ಬಂದಿ ಅವರನ್ನು ನೀರಿನಿಂದ ಹೊರಗೆಳೆಯುವಲ್ಲಿ ಯಶಸ್ವಿಯಾದರು. ನೀರಿನಲ್ಲಿ ಮುಳುಗಿ ಸಾವು ಸಂಭವಿಸಿದೆ ಎಂದು ಆರಂಭಿಕ ವರದಿಗಳು ಹೇಳಿವೆ. ತಕ್ಷಣವೇ ದಿಘಾ ಉಪವಿಭಾಗೀಯ ಆಸ್ಪತ್ರೆಗೆ ಅವರನ್ನು ಸಾಗಿಸಲಾಯಿತು. ಸಂಜೆ 6.10ಕ್ಕೆ ಅವರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು.
43 ವರ್ಷ ವಯಸ್ಸಿನ ಈ ಜನಪ್ರಿಯ ನಟ, ನಟಿ ಪತ್ನಿ ಪ್ರಿಯಾಂಕಾ ಸರ್ಕಾರ್ ಹಾಗೂ ಮಗನನ್ನು ಅಗಲಿದ್ದಾರೆ. ರಾಹುಲ್ ನಿಧನವನ್ನು ಪ್ರಿಯಾಂಕಾ ಸರ್ಕಾರ್ ತಮ್ಮ ಇನ್ಸಾಗ್ರಾಂ ಹ್ಯಾಂಡಲ್ ನಲ್ಲಿ ಪ್ರಕಟಿಸಿದ್ದಾರೆ. “ಇದು ನಮಗೆ ಅತೀವ ದುಃಖ ಹಾಗೂ ಶೋಕದ ಸನ್ನಿವೇಶ. ಈ ಕಠಿಣ ಸನ್ನಿವೇಶದಲ್ಲಿ ನಾವು ಖಾಸಗಿತನವನ್ನು ಬಯಸುತ್ತೇವೆ” ಎಂದು ಅವರು ಮನವಿ ಮಾಡಿದ್ದಾರೆ.