ಬೆಳ್ತಂಗಡಿ ಕಿಡ್ನಾಪ್ ಪ್ರಕರಣ ಸುಖಾಂತ್ಯಬಯಲಾಯ್ತು ವಿದ್ಯಾರ್ಥಿನಿಯ ಕಿಡ್ನಾಪ್ ಕಹಾನಿ!

ಮಂಗಳೂರು: ಬೆಳ್ತಂಗಡಿಯಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಪಿಯುಸಿ ವಿಧ್ಯಾರ್ಥಿನಿಯ ಕಿಡ್ನಾಪ್ ಪ್ರಕರಣದಲ್ಲಿ ಇದೀಗ ಟ್ವಿಸ್ಟ್ ಸಿಕ್ಕಿದ್ದು, ವಿಧ್ಯಾರ್ಥಿನಿಯ ಕಿಡ್ನಾಪ್ ಡ್ರಾಮಾ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ

ಕಾಶಿಬೆಟ್ಟು ಸರ್ಕಾರಿ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಸ್ಕೂಟರ್ ತಡೆದು ಕಾರಿನಲ್ಲಿ ಬಂದಿದ್ದ ಮುಸುಕುಧಾರಿಗಳು ಸುದೆಮುಗೇರು ಎಂಬಲ್ಲಿ ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ, ಈ ವೇಳೆ ತನ್ನ ಕೈಗೆ ಚೂರಿಯಿಂದ ಹಲ್ಲೆ ಮಾಡಿದ್ದಾರೆಂದು ಯುವತಿ ದೂರಿದ್ದು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆ ಭಾರೀ ಸಂಚಲನ ಮೂಡಿಸಿದ್ದರಿಂದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತು ಪೊಲೀಸರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಲ್ಲದೆ ಘಟನೆ ಬಗ್ಗೆ ಮಾಹಿತಿ ಪಡೆದಿದ್ದರು.

ಪ್ರಕರಣ ದಾಖಲಾಗುತ್ತಿದ್ದಂತೆ ಇಡೀ ದಿನ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿತ್ತು, ಪೊಲೀಸರು ಆಸುಪಾಸಿನಲ್ಲಿ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ಕೈಗೊಂಡಿದ್ದರು. ಪೊಲೀಸರಿಗೆ ಸಾಂದರ್ಭಿಕ ಸಾಕ್ಷ್ಯಗಳು ಸಿಗದೇ ಇದ್ದುದರಿಂದ ವಿದ್ಯಾರ್ಥಿನಿಯನ್ನೇ ಹೆಚ್ಚುವರಿ ಮಾಹಿತಿ ಪಡೆಯಲು ವಿಧ್ಯಾರ್ಥಿನಿಯ ವಿಚಾರಣೆ ನಡೆಸಿದ್ದರು.
ಈ ವೇಳೆ ನಾನು ಮಂಗಳೂರಿನ ಕಾಲೇಜು ಸೇರುವುದಕ್ಕಾಗಿ ಅಪಹರಣದ ಕತೆ ಕಟ್ಟಿದ್ದಾಗಿ ತಿಳಿಸಿದ್ದಾಳೆ. ಗ್ರಾಮೀಣ ಭಾಗದ ಕಾಲೇಜು ಬದಲು ಮಂಗಳೂರು ನಗರದ ಕಾಲೇಜಿಗೆ ಹೋಗಲು ಬಯಸಿದ್ದು ಅದಕ್ಕಾಗಿ ತಾನೇ ಬ್ಲೇಡ್ ನಿಂದ ಕೈಯನ್ನು ಕೊಯ್ದುಕೊಂಡಿದ್ದಾಗಿ ತಿಳಿಸಿದ್ದಾಳೆ. ಇದಲ್ಲದೆ, ತನ್ನ ಮನೆಯ ಸಮೀಪವೇ ಪುಸ್ತಕಗಳನ್ನು ಸುಟ್ಟು ಹಾಕಿದ್ದಳು, ಇದರಂತೆ, ತನ್ನ ಬ್ಯಾಗನ್ನು ಅಪಹರಣಕ್ಕೆ ಬಂದಿದ್ದವರು ಹೊತ್ತೊಯ್ದಿದ್ದಾರೆ ಎಂದು ಕತೆ ಸೃಷ್ಟಿಸಿದ್ದಳು. ವಿದ್ಯಾರ್ಥಿನಿಯ ಈ ಹೇಳಿಕೆ ಪೊಲೀಸರಿಗೆ ಶಾಕ್ ನೀಡಿದೆ.
ಬೆಳ್ತಂಗಡಿಯ ಕಿಡ್ನಾಪ್ ಪ್ರಕರಣ ಭಾರೀ ಸಂಚಲನ ಮೂಡಿಸಿತ್ತು, ಹಿರಿಯ ಪೊಲೀಸ್ ಅಧಿಕಾರಿಗಳು ಮಂಗಳೂರಿನ ಬಂದು ಮಾಹಿತಿ ಪಡೆದಿದ್ದರು. ಆದರೆ ವಿಧ್ಯಾರ್ಥಿನಿಯ ಕಿಡ್ನಾಪ್ ಡ್ರಾಮಾಕ್ಕೆ ಪೊಲೀಸರು ಸುಸ್ತಾಗಿ ಹೋಗಿದ್ದಾರೆ.