ಬಿಜೈ ಮಸಾಜ್ ಪಾರ್ಲರ್ ದಾಳಿ ಪ್ರಕರಣ ; ರಾಮ ಸೇನೆಯ ಪ್ರಸಾದ್ ಅತ್ತಾವರ್ ಸೇರಿ 11 ಮಂದಿಗೆ ಜಾಮೀನು.

ಮಂಗಳೂರು: ಮಸಾಜ್ ಪಾರ್ಲರ್ ಮೇಲೆ ದಾಳಿ ಎಸಗಿದ ಪ್ರಕರಣದಲ್ಲಿ ಬಂಧಿತರಾಗಿದ್ದ ರಾಮ ಸೇನೆಯ ಮುಖಂಡ ಪ್ರಸಾದ್ ಅತ್ತಾವರ್ ಸೇರಿ 11 ಮಂದಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಜ.23ರಂದು ನಗರದ ಬಿಜೈ ಕೆಎಸ್ಸಾರ್ಟಿಸಿ ಬಳಿಯ ಆದಿತ್ಯ ಕಾಂಪ್ಲೆಕ್ಸ್ ನಲ್ಲಿ ಕಲರ್ಸ್ ಯೂನಿಸೆಕ್ಸ್ ಸೆಲೂನ್ ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ರಾಮ ಸೇನೆಯ ಕಾರ್ಯಕರ್ತರು ದಾಳಿ ಎಸಗಿದ್ದರು. ಕೃತೃದ ಸಂದರ್ಭದಲ್ಲಿ ಪೀಠೋಪಕರಣಗಳನ್ನು ಧ್ವಂಸ ಮಾಡಿ ಅಲ್ಲಿದ್ದ ಮಹಿಳಾ ಸಿಬಂದಿಗೆ ಜೀವ ಬೆದರಿಕೆ ಹಾಕಿದ್ದರು. ಘಟನೆ ಸಂಬಂಧಿಸಿ ಸೆಲೂನ್ ಮಾಲೀಕ ಸುಧೀರ್ ಶೆಟ್ಟಿ ಬರ್ಕೆ ಠಾಣೆಗೆ ದೂರು ನೀಡಿದ್ದರು.
ಬರ್ಕೆ ಪೊಲೀಸರು ಪ್ರಸಾದ್ ಅತ್ತಾವರ ಸೇರಿದಂತೆ 14 ಮಂದಿಯನ್ನು ಬಂಧಿಸಿದ್ದು ಮಂಗಳೂರಿನ 6ನೇ ಜೆಎಂಎಫ್ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಎಲ್ಲ ಆರೋಪಿಗಳಿಗೂ ನ್ಯಾಯಾಂಗ ಬಂಧನ ವಿಧಿಸಿತ್ತು. ಆರೋಪಿಗಳ ಪರವಾಗಿ ವಕೀಲ ಮಯೂರ ಕೀರ್ತಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಫೆ.5ರಂದು ಪ್ರಸಾದ್ ಅತ್ತಾವರ್ ಮತ್ತು ಇತರ ಹತ್ತು ಮಂದಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ನಡುವೆ, ಪ್ರಸಾದ್ ಅತ್ತಾವರ್ ಜೈಲು ಪಾಲಾಗಿದ್ದರೂ ಅನಾರೋಗ್ಯ ನೆಪವೊಡ್ಡಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲದೆ, ಪೊಲೀಸರು ಆತನ ಮೊಬೈಲ್ ತನಿಖೆ ನಡೆಸಿದ ಸಂದರ್ಭದಲ್ಲಿ ವಾಮಾಚಾರ ನಡೆಸಿರುವುದು ಪತ್ತೆಯಾಗಿದ್ದರಿಂದ ಆ ಬಗ್ಗೆ ಮತ್ತೊಂದು ಪ್ರಕರಣವನ್ನು ಬರ್ಕೆ ಠಾಣೆಯಲ್ಲಿ ದಾಖಲಿಸಿದ್ದರು.
