ಮನೆಗೆ ಊಟಕ್ಕೆ ಕರೆಸಿ ಬಿಸಿಎ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಖಾಸಗಿ ಕಾಲೇಜಿನ ಪ್ರೊಫೆಸರ್ ಬಂಧನ

ಬೆಂಗಳೂರು: ಮನೆಗೆ ಊಟಕ್ಕೆ ಕರೆಸಿ ಬಿಸಿಎ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇಲೆ ಖಾಸಗಿ ಕಾಲೇಜಿನ ಪ್ರೊಫೆಸರ್‌ನನ್ನು ತಿಲಕ್ ನಗರ ಪೊಲೀಸರು (Tilak Nagar Police) ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ (West Bengal) ಮೂಲದ ಸಂಜೀವ್ ಕುಮಾರ್ ಮಂಡಲ್ ಬಂಧಿತ ಪ್ರೊಫೆಸರ್. ನಗರದ ಪ್ರತಿಷ್ಟಿತ ಕಾಲೇಜಿನಲ್ಲಿ ಹೆಚ್‌ಓಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿಯು ಅದೇ ಕಾಲೇಜಿನಲ್ಲಿ ಬಿಸಿಎ ಎರಡನೇ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಆಕೆಯು ಪಶ್ಚಿಮ ಬಂಗಾಳ ಮೂಲದವಳಾಗಿದ್ದಳು.
ಕಾಲೇಜಿನಲ್ಲಿ ಆಕೆಗೆ ಉಪನ್ಯಾಸಕನಾಗಿದ್ದರಿಂದ ಅ.2 ರಂದು ವಿದ್ಯಾರ್ಥಿನಿಯನ್ನು ಪ್ರೊಫೆಸರ್ ಮನೆಗೆ ಊಟಕ್ಕೆ ಕರೆದಿದ್ದ. ಹೀಗಾಗಿ ವಿದ್ಯಾರ್ಥಿನಿ ಪ್ರೊಫೆಸರ್ ಮನೆಗೆ ಊಟಕ್ಕೆ ಹೋಗಿದ್ದಳು. ಮನೆಯಲ್ಲಿ ಪ್ರೊಫೆಸರ್ ಒಬ್ಬನೇ ಇದ್ದುದ್ದರಿಂದ ವಿದ್ಯಾರ್ಥಿನಿಯು ಗಾಬರಿಗೊಂಡಿದ್ದಳು. ಈ ವೇಳೆ ಆಕೆಗೆ ಕುಡಿಯಲು ನೀರು ಕೊಟ್ಟು, ಆಕೆಯ ಪಕ್ಕದಲ್ಲೇ ಪ್ರೊಫೆಸರ್ ಕುಳಿತುಕೊಂಡಿದ್ದ
ಬಳಿಕ ನಿನಗೆ ಹಾಜರಾತಿ ಕಡಿಮೆ ಇದೆ, ಹಾಜರಾತಿ ಹಾಕಿ ಕೊಡುತ್ತೇನೆ. ಪರೀಕ್ಷೆಯಲ್ಲಿ ಮಾರ್ಕ್ಸ್ ಕೊಡೋದಾಗಿ ಹೇಳಿ ವಿದ್ಯಾರ್ಥಿನಿ ಮೈ, ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ. ಗಾಬರಿಗೊಂಡ ವಿದ್ಯಾರ್ಥಿನಿ ಅಲ್ಲಿಂದ ಎದ್ದು ಬಂದಿದ್ದಳು ಎನ್ನಲಾಗಿದೆ.
ಬಳಿಕ ವಿದ್ಯಾರ್ಥಿನಿಯು ಮನೆಯವರ ಸಲಹೆ ಮೇರೆಗೆ ಸಂಜೀವ್ ಕುಮಾರ್ ಮಂಡಲ್ ವಿರುದ್ಧ ತಿಲಕ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪ್ರೊಫೆಸರ್‌ನನ್ನು ಬಂಧಿಸಿದ್ದಾರೆ.