ಬಯಲಲ್ಲಿ ಸ್ನಾನ,ಶೌಚಾಲಯ ಬಳಿ ಕ್ಯಾಮೆರಾ- ಶಿಬಿರದಲ್ಲಿ ಮಹಿಳಾ ಕಾನ್‌ಸ್ಟೆಬಲ್‌ಗಳ ಆಕ್ರೋಶ

ಉತ್ತರ ಪ್ರದೇಶ: ಗೋರಖ್‌ಪುರದ (Ghorakhpur) ಬಿಚ್ಚಿಯಾದಲ್ಲಿರುವ ಪಿಎಸಿ ಶಿಬಿರದಲ್ಲಿ (PAC Camp) ತರಬೇತಿ ಪಡೆಯುತ್ತಿರುವ 600 ಮಹಿಳಾ ಕಾನ್‌ಸ್ಟೆಬಲ್‌ಗಳು ಪ್ರತಿಭಟನೆ ನಡೆಸಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅಲ್ಲದೇ ತರಬೇತಿ ಕೇಂದ್ರದಲ್ಲಿನ ಕಳಪೆ ಜೀವನ ಪರಿಸ್ಥಿತಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಬಯಲಲ್ಲಿ ಸ್ನಾನ ಮಾಡುವಂತೆ ಒತ್ತಾಯ: ತಮ್ಮನ್ನು ಬಯಲಿನಲ್ಲಿ ಸ್ನಾನ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಇಲ್ಲಿ ನಮಗೆ ಯಾವುದೇ ಭದ್ರತೆ ಇಲ್ಲ. ಕೇಂದ್ರವು ಕಿಕ್ಕಿರಿದು ತುಂಬಿದೆ. ಕ್ಯಾಂಪಸ್‌ನಲ್ಲಿ 360 ತರಬೇತಿ ಪಡೆಯುವವರಿಗೆ ಸ್ಥಳವಿದ್ದರೂ, ಸುಮಾರು 600 ಜನರಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮನ್ನು ಬಯಲಿನಲ್ಲಿ ಸ್ನಾನ ಮಾಡುವಂತೆ ಒತ್ತಾಯಿಸಲಾಗುತ್ತದೆ. ಈ ಬಗ್ಗೆ ದೂರು ನೀಡಲು ಹೋದರೆ ಇಲ್ಲಿನ ಉಸ್ತುವಾರಿಗಳು ದೌರ್ಜನ್ಯ ಎಸಗುತ್ತಾರೆ. ಅಲ್ಲದೇ ಮಹಿಳಾ ಶೌಚಾಲಯದ ಗ್ಯಾಲರಿಯ ಬಳಿ ಇರುವ ಕ್ಯಾಮೆರಾಗಳ ಉಪಸ್ಥಿತಿಯು ಪ್ರಮುಖ ಕಳವಳಗಳಲ್ಲಿ ಒಂದಾಗಿದ್ದು, ಅದನ್ನು ತಕ್ಷಣವೇ ತೆಗೆದುಹಾಕಬೇಕೆಂದು ಅವರು ಒತ್ತಾಯಿಸಿದರು.
ಮೂರ್ಛೆ ಹೋದ ಮಹಿಳಾ ಕಾನ್‌ಸ್ಟೆಬಲ್: ಪ್ರತಿಭಟನೆಯ ಸಂದರ್ಭದಲ್ಲಿ ಮಹಿಳಾ ಕಾನ್‌ಸ್ಟೆಬಲ್ ಒಬ್ಬರು ಮೂರ್ಛೆ ಹೋದ ಪ್ರಸಂಗ ಕೂಡ ನಡೆದಿದೆ. ಅಸಮಾಧಾನಗೊಂಡಿರುವ ಮಹಿಳಾ ಕಾನ್‌ಸ್ಟೆಬಲ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ, ಅನೇಕ ಮಹಿಳೆಯರು ಕಣ್ಣೀರು ಹಾಕುತ್ತಾ ಮಾತನಾಡಲು ಆರಂಭಿಸಿದರು, ಈಗೆ ವೇಳೆ ಒಬ್ಬಾಕೆ ಮೂರ್ಛೆ ಹೋದರು.
ಕೊನೆಗೆ ಪಿಎಸಿ ಕಮಾಂಡೆಂಟ್ ಆನಂದ್ ಕುಮಾರ್ ಮತ್ತು ಸಿಒ ದೀಪಾಂಶಿ ರಾಥೋಡ್ ಸೇರಿದಂತೆ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಶಾಂತಗೊಳಿಸಲು ಶಿಬಿರಕ್ಕೆ ತೆರಳಿ ಪ್ರತಿಭಟನಾಕಾರರೊಂದಿಗೆ ಮಾತನಾಡಿದರು ಮತ್ತು ಅವರ ಕುಂದುಕೊರತೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. ಮಾತುಕತೆಯ ನಂತರ, ಮಹಿಳೆಯರು ತರಬೇತಿ ಕೇಂದ್ರಕ್ಕೆ ಮರಳಿದರು
ಅಖಿಲೇಶ್ ಯಾದವ್ ಪ್ರತಿಕ್ರಿಯೆ: ಇಡೀ ವಿಷಯದ ಬಗ್ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ, ‘ಮಹಿಳಾ ಪೊಲೀಸ್ ನೇಮಕಾತಿ ತರಬೇತಿ ಕೇಂದ್ರದ ದುರುಪಯೋಗದ ಬಗ್ಗೆ ಗೋರಖ್‌ಪುರದಿಂದ ದುರದೃಷ್ಟಕರ ಸುದ್ದಿ ಬರುತ್ತಿದೆ. ವಿದ್ಯುತ್ ಇಲ್ಲ, ನೀರಿಲ್ಲ, ಸ್ನಾನಗೃಹಗಳಿಲ್ಲ. ಮುಖ್ಯ ನಗರದ ಸ್ಥಿತಿ ಹೀಗಿರುವಾಗ, ಉಳಿದವರ ಬಗ್ಗೆ ಏನು ಹೇಳಬೇಕು. ನಾರಿ ವಂದನ ಎಂಬುದು ಬಿಜೆಪಿಯ ಘೋಷಣೆಯಾಗಿದೆ ಎಂದಿದ್ದಾರೆ.