ಪತಿಯ ಹತ್ಯೆ ಹಿನ್ನೆಲೆ ಬಾಲಿವುಡ್ ಸಿನಿಮಾ: ‘ಹನಿಮೂನ್ ಇನ್ ಶಿಲ್ಲಾಂಗ್’ ಶೀಘ್ರದಲ್ಲೇ ಶೂಟಿಂಗ್ ಆರಂಭ

ನಿಜ ಜೀವನದ ಘಟನೆ ಆಧರಿಸಿ ಸಾಕಷ್ಟು ಸಿನಿಮಾಗಳು ಮೂಡಿ ಬಂದಿವೆ. ಅದರಲ್ಲೂ ಶಾಕಿಂಗ್ ಎನಿಸುವಂತಹ ಘಟನೆ ನಡೆದರೆ ಸಿನಿಮಾ ಮಾಡಲು ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇತ್ತೀಚೆಗೆ ಮೇಘಾಲಯದ ಶಿಲ್ಲಾಂಗ್ನಲ್ಲಿ ಹನಿಮೂನ್ಗೆಂದು ಬಂದ ದಂಪತಿಯಲ್ಲಿ ಪತಿ ರಾಜಾ ರಘುವಂಶಿಯ ಕೊಲೆ ಆಗಿತ್ತು. ಇದನ್ನು ಮಾಡಿದ್ದು ಆತನ ಪತ್ನಿ ಸೋನಂ ರಘುವಂಶಿ ಎಂಬ ವಿಚಾರ ನಂತರ ಬೆಳಕಿಗೆ ಬಂದಿತ್ತು. ಈಗ ಈ ಘಟನೆ ಸಿನಿಮಾ ಆಗುತ್ತಿದೆ.

ಬಾಲಿವುಡ್ನಲ್ಲಿ ಎಸ್ಪಿ ನಿಂಬಾವತ್ ಅವರು ‘ಹನಿಮೂನ್ ಇನ್ ಶಿಲ್ಲಾಂಗ್’ ಸಿನಿಮಾ ಮಾಡುತ್ತಿದ್ದಾರೆ. ರಾಜ ರಘುವಂಶಿ ಕೊಲೆ ಪ್ರಕರಣದ ಸುತ್ತ ಕಥೆ ಸಾಗಲಿದೆ. ಈಗಾಗಲೇ ಸಿನಿಮಾದ ಸ್ಕ್ರಿಪ್ಟ್ನ ಪೂರ್ಣಗೊಳಿಸಲಾಗಿದೆ. ಶೇ.80ರಷ್ಟು ಶೂಟ್ ಇಂದೋರ್ನಲ್ಲಿ ನಡೆಯಲಿದೆ. ಉಳಿದ 20 ಭಾಗದಷ್ಟು ಶೂಟ್ ಮೇಘಾಲಯದ ವಿವಿಧ ಕಡೆಗಳಲ್ಲಿ ನಡೆಯಲಿದೆ. ಸದ್ಯ ಪಾತ್ರವರ್ಗದ ಬಗ್ಗೆ ನಿರ್ದೇಶಕರು ಯಾವುದೇ ಮಾಹಿತಿ ನೀಡಿಲ್ಲ.
ರಾಜಾ ರಘುವಂಶಿ ಸಹೋದರ ಸಚಿನ್ ರಘುವಂಶಿ ಅವರು ಈ ಸಿನಿಮಾ ಮಾಡಲು ಸಂಪೂರ್ಣ ಬೆಂಬಲ ನೀಡಿದ್ದಾರೆ. ‘ನಾನು ಈ ಸಿನಿಮಾ ಮಾಡಲು ಸಂಪೂರ್ಣ ಬೆಂಬಲ ನೀಡಿದ್ದೇವೆ. ನನ್ನ ಸಹೋದರನ ಕೊಲೆಯ ಪ್ರಕರಣ ದೊಡ್ಡ ಪರದೆಯಮೇಲೆ ಬರದೇ ಇದ್ದರೆ ಜನರಿಗೆ ಯಾರು ಸರಿ, ಯಾರು ತಪ್ಪು ಎಂಬ ವಿಚಾರ ಗೊತ್ತಾಗುವುದೇ ಇಲ್ಲ. ಕೊಲೆಯ ಹಿಂದಿನ ಘಟನೆಗಳ ಬಗ್ಗೆ ಸಿನಿಮಾ ಬೆಳಕು ಚೆಲ್ಲಲಿದೆ ಎಂಬ ನಂಬಿಕೆ ನನ್ನದು’ ಎನ್ನುತ್ತಾರೆ ಸಚಿನ್.
‘ರಾಜಾ ರಘುವಂಶಿ ಮದುವೆ, ಮದುವೆಗೂ ಮೊದಲು ಅವರ ಪತ್ನು ಮಾಡಿದ ಪ್ಲ್ಯಾನ್ ಎಲ್ಲವನ್ನೂ ಚಿತ್ರದಲ್ಲಿ ತೋರಿಸಲಾಗುತ್ತದೆ. ಈ ಸಿನಿಮಾ ಮೂಲಕ ಒಂದು ಸಂದೇಶ ನೀಡುವ ಕೆಲಸ ಮಾಡಲಿದ್ದೇವೆ. ಈ ಚಿತ್ರ ಕೇವಲ ಥ್ರಿಲ್ ನೀಡೋದಿಲ್ಲ. ಜೊತೆಗೆ ಒಂದೊಳ್ಳೆಯ ಸಂದೇಶ ಕೂಡ ಕೊಡುತ್ತೇವೆ’ ಎನ್ನುತ್ತಾರೆ ಅವರು.
ಏನಿದು ಘಟನೆ?
ರಾಜಾ ರಘುವಂಶಿ ಹಾಗೂ ಸೋನಂ ರಘುವಂಶಿ ವಿವಾಹ ಆಗಿದ್ದರು. ರಾಜ ಅವರು ಇಂದೋರ್ ಉದ್ಯಮಿ. ಮೇಘಾಲಯಕ್ಕೆ ಹನಿಮೂನ್ ತೆರಳಿದ ವೇಳೆ ಪತಿಯನ್ನು ಕೊಲೆ ಮಾಡಿದ್ದರು ಸೋನಂ. ಆಕೆಯ ‘ಪ್ರೇಮಿ’ ರಾಜ್ ಕುಶ್ವಾಹ ಮತ್ತು ಇತರ ಮೂವರನ್ನು ಕೂಡ ಇದರಲ್ಲಿ ಶಾಮೀಲಾಗಿದ್ದಾರೆ. ಸದ್ಯ ಇವರು ಜೈಲಿನಲ್ಲಿದ್ದಾರೆ.
