ಬಾಗಲಕೋಟೆ: ಪಶು ವೈದ್ಯರ ಬಳಿ ಸ್ವಯಂ ಚಿಕಿತ್ಸೆ ಪಡೆದ ಬುದ್ಧಿವಂತ ಮಂಗ

ಬಾಗಲಕೋಟೆ: ಮನುಷ್ಯರಿಗೆ ಆರೋಗ್ಯ ಸಮಸ್ಯೆಯಾದರೆ ತಕ್ಷಣ ಆಸ್ಪತ್ರೆಗೆ ಹೋಗುತ್ತಾರೆ. ಆದರೆ, ಮೂಕ ಪ್ರಾಣಿಗಳಿಗೆ ಸಮಸ್ಯೆಯಾದರೆ ಎಲ್ಲಿಗೆ ಹೋಗಬೇಕು? ಪಶುವೈದ್ಯಕೀಯ ಆಸ್ಪತ್ರೆಗಳಿದ್ದರೂ ಪ್ರಾಣಿಗಳಿಗೆ ಆ ಬಗ್ಗೆ ಅರಿವು ಇರುವುದಿಲ್ಲ. ಆದರೆ, ಇಲ್ಲೊಂದು ಕೋತಿ ಮಾತ್ರ ತಾನಾಗಿಯೇ ಪಶು ಆಸ್ಪತ್ರೆಗೆ ಹೋಗಿ, ನೋವಿಗೆ ಚಿಕಿತ್ಸೆ ಪಡೆದುಕೊಂಡಿರುವ ಅಚ್ಚರಿ ಘಟನೆ ನಡೆದಿದೆ
ಹೌದು, ಗುದದ್ವಾರದಲ್ಲಿ ನೋವು ಸಹಿಸಲಾರದೇ ಮಂಗವೊಂದು ತಾನಾಗಿಯೇ ಪಶು ಆಸ್ಪತ್ರೆಗೆ ತೆರಳಿ, ಚಿಕಿತ್ಸೆ ಪಡೆದ ಅಪರೂಪದ ಘಟನೆ ಬಾಗಲಕೋಟೆ ಜಿಲ್ಲೆಯ (Bagalkot News) ಇಳಕಲ್ ತಾಲೂಕಿನ ಗೂಡೂರಿನಲ್ಲಿ ನಡೆದಿದೆ.
ಗೂಡೂರಿನ ಪಶು ಆಸ್ಪತ್ರೆಗೆ ಹೋದ ಮಂಗ, ಪಶು ವೈದ್ಯರ ಬಳಿ ತೆರಳಿ ತನ್ನ ಗುದದ್ವಾರದ ಕಡೆ ಕೈ ತೋರಿಸಿ, ಸಮಸ್ಯೆಯನ್ನು ತಿಳಿಸಿದೆ. ತಕ್ಷಣ ಕೋತಿಯ ನೋವನ್ನು ಅರ್ಥ ಮಾಡಿಕೊಂಡ ಪಶುವೈದ್ಯ ಜಿ.ಜಿ. ಬಿಲ್ಲೋರ ಅವರು ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಚಿಕಿತ್ಸೆ ಪಡೆದ ಮಂಗ ನಂತರ ಅಲ್ಲಿಂದ ಹೊರಟು ಹೋಗಿದೆ. ಈ ದೃಶ್ಯವನ್ನು ಕಂಡ ಸ್ಥಳೀಯರು ಹುಬ್ಬೇರಿಸಿದ್ದು, ಕೋತಿಯ ಬುದ್ಧಿವಂತಿಕೆಯನ್ನು ಕೊಂಡಾಡಿದ್ದಾರೆ. ಅಲ್ಲದೇ ಕೋತಿಯ ನೋವನ್ನು ಅರ್ಥಮಾಡಿಕೊಂಡು ಚಿಕಿತ್ಸೆ ನೀಡಿದ ವೈದ್ಯರ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.