ಮಧ್ಯಾಹ್ನದ ಊಟದ ಬಳಿಕ ಈ ತಪ್ಪುಗಳನ್ನು ಮಾಡಬೇಡಿ: ಆರೋಗ್ಯಕ್ಕೆ ಗಂಭೀರ ಪರಿಣಾಮ!

ಮನುಷ್ಯನ ಜೀವನದಲ್ಲಿ ಊಟಕ್ಕಿಂತ ಮಿಗಿಲಾದ್ದದ್ದು ಮತ್ತೊಂದಿಲ್ಲ ಎಂದರೆ ಖಂಡಿತ ತಪ್ಪಾಗಲಾರದು. ದುಡಿಯುವುದು ಹೊಟ್ಟೆಗಾಗಿ, ಬಟ್ಟೆಗಾಗಿ ಎಂದು ನಂಬಿ, ಬದುಕುತ್ತಿರುವ ಜನರು, ಮೂರೊತ್ತು ಊಟಕ್ಕೆ ಬಹಳ ಆದ್ಯತೆ, ಪ್ರಾಮುಖ್ಯತೆ ಕೊಡುತ್ತಾರೆ. ತಮ್ಮಿಷ್ಟದ ಆಹಾರವನ್ನು ತಿನ್ನುವ ಮೂಲಕ ಹೊಟ್ಟೆಗೆ ತೃಪ್ತಿ ನೀಡುತ್ತಾರೆ

ಆದರೆ, ಊಟಕ್ಕೂ ಮುನ್ನ ಮತ್ತು ಬಳಿಕ ಮಾಡುವ ಕೆಲವೊಂದು ತಪ್ಪುಗಳು ಅನಾರೋಗ್ಯಕ್ಕೆ ದೂಡುತ್ತವೆ.
ವಿಶೇಷವಾಗಿ, ಮಧ್ಯಾಹ್ನದ ಊಟವು ನಮಗೆ ಬಹಳ ಮುಖ್ಯ. ಇದು ನಮ್ಮ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಆಹಾರದಲ್ಲಿರುವ ಪ್ರಯೋಜನಗಳು ದೇಹವನ್ನು ತಲುಪದಿರುವ ಸಾಧ್ಯತೆಗಳು ಹೆಚ್ಚು. ಮುಖ್ಯವಾಗಿ, ಮಧ್ಯಾಹ್ನ ಊಟದ ಸಮಯದಲ್ಲಿ ಮಾಡುವ ಸಣ್ಣ ತಪ್ಪುಗಳು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಹಾಗಿದ್ದರೆ, ಯಾವುದು ಆ ತಪ್ಪುಗಳು? ಎಂಬ ಮಾಹಿತಿ ಹೀಗಿದೆ ಗಮನಿಸಿ.
ಈ ಅಭ್ಯಾಸ ತುಂಬ ಜನರಿಗಿದೆ. ಕೆಲಸದ ಬಿಡುವಿನಲ್ಲಿ ಮನೆಗೆ ಬರುವ ಅನೇಕರು, ಊಟ ಮಾಡಿದ ಕೆಲವೇ ಹೊತ್ತಿನಲ್ಲಿ ನಿದ್ರೆಗೆ ಜಾರುತ್ತಾರೆ. ಇದು ಅವರಿಗೆ ಒಳ್ಳೆಯ ನಿದ್ರೆಯನ್ನು ನೀಡುವುದೇ ಆದರೂ ಹಲವು ಸಮಸ್ಯೆಗೆ ಕಾರಣವಾಗುತ್ತದೆ. ಈ ರೀತಿ ಮಾಡುವುದರಿಂದ ಜೀರ್ಣಕ್ರಿಯೆ ನಿಧಾನಗೊಳ್ಳುತ್ತದೆ. ಆಹಾರವು ಸಂಪೂರ್ಣವಾಗಿ ಜೀರ್ಣವಾಗುವುದಿಲ್ಲ. ಇದು ಗ್ಯಾಸ್, ಉಳಿತೇಗು, ಅಜೀರ್ಣ ಮತ್ತು ಎದೆಯುರಿ ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು. ಊಟ ಮಾಡಿದ ಕನಿಷ್ಠ 30 ನಿಮಿಷಗಳ ಬಳಿಕ ಮಲಗುವುದು ಉತ್ತಮ.
ಹಲವರು ಊಟ ತಿಂದ ತಕ್ಷಣ ವಾಕಿಂಗ್ ಮಾಡುತ್ತಾರೆ. ಅವರ ಪ್ರಕಾರ, ವಾಕಿಂಗ್ ಮಾಡುವುದರಿಂದ ತಿಂದ ಊಟ ಚೆನ್ನಾಗಿ ಜೀರ್ಣವಾಗುತ್ತದೆ ಎಂಬ ತಪ್ಪು ತಿಳುವಳಿಕೆ. ಆದರೆ ಆ ಸಮಯದಲ್ಲಿ ಹೆಚ್ಚು ನಡೆಯುವುದು ಜೀರ್ಣಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ, ಊಟ ಮಾಡಿದ 20ರಿಂದ 30 ನಿಮಿಷಗಳ ನಂತರ ನಡೆಯುವುದು ಉತ್ತಮ. ಲಘುವಾಗಿ ನಡೆಯುವುದು ಜೀರ್ಣಕ್ರಿಯೆಗೆ ಸಹಕಾರಿ. ಆದರೆ, ತಕ್ಷಣದ ವಾಕಿಂಗ್ ಬಿಟ್ಟುಬಿಡಿ.
ಕೆಲವರು ಊಟ ಮಾಡಿದ ಬಳಿಕ ಸಿಗರೇಟ್ ಸೇದುವ ಅಭ್ಯಾಸ ಹೊಂದಿದ್ದಾರೆ. ಧೂಮಪಾನ ಮಾಡುವುದೇ ಒಂದು ಚಟವಾದರೆ, ತಿಂಡಿ, ಊಟ ಸವಿದ ತಕ್ಷಣ ಸಿಗರೇಟ್ ಸೇದುವುದು ಇನ್ನೊಂದು ಚಟವಾಗಿ ಮಾರ್ಪಟ್ಟಿದೆ. ಇದು ತುಂಬಾ ಅಪಾಯಕಾರಿ! ಊಟದ ಬಳಿಕ ಸಿಗರೇಟ್ ಸೇದುವುದರಿಂದ ಬಾಯಿಯ ಕ್ಯಾನ್ಸರ್, ಶ್ವಾಸಕೋಶದ ಕಾಯಿಲೆಗಳು ಮತ್ತು ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ದೇಹದ ಅಂಗಗಳು ಜೀರ್ಣಕ್ರಿಯೆಯ ಮೇಲೆ ಕೇಂದ್ರೀಕರಿಸುತ್ತವೆ. ಅಂತಹ ಸಮಯದಲ್ಲಿ ಸಿಗರೇಟ್ ಸೇದುವುದು ಆರೋಗ್ಯಕ್ಕೆ ಅಪಾಯಕಾರಿ.
ತಿಂಡಿ, ಊಟ ಮಾಡಿದ ತಕ್ಷಣ ಸ್ನಾನ ಮಾಡುವ ಅಭ್ಯಾಸ ಕೂಡ ಹಲವರಿಗಿದೆ. ಅವರ ಪ್ರಕಾರ, ಇದು ಸರಿಯೇ. ಇದೊಂದು ರೀತಿ ಅವರ ದಿನಚರಿಯಾಗಿ ಬದಲಾಗಿರುತ್ತದೆ. ಊಟ ಮಾಡಿದ ಕೂಡಲೇ ಸ್ನಾನ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಬದಲಾಗಿ ಚರ್ಮಕ್ಕೆ ರಕ್ತದ ಹರಿವು ಬದಲಾಗುತ್ತದೆ. ಇದರ ಪರಿಣಾಮವಾಗಿ, ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ. ಇದು ಅಜೀರ್ಣ ಮತ್ತು ಆಯಾಸದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಊಟ ತಿಂದ ನಂತರ ಕನಿಷ್ಠ ಒಂದು ಗಂಟೆಯ ಬಳಿಕ ಸ್ನಾನ ಮಾಡುವುದು ಒಳಿತು.
ಊಟ ಮಾಡಿದ ಕೂಡಲೇ ತಣ್ಣೀರು ಅಥವಾ ಹಣ್ಣಿನ ಜ್ಯೂಸ್ ಕುಡಿಯುವುದು ಒಳ್ಳೆಯದಲ್ಲ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಇದು ಅಜೀರ್ಣ, ಗ್ಯಾಸ್ ಮತ್ತು ಆಯಾಸದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ತಣ್ಣನೆಯ ಆಹಾರಗಳು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತವೆ. ಊಟ ತಿಂದ ಕನಿಷ್ಠ 30 ನಿಮಿಷಗಳ ನಂತರ ಜ್ಯೂಸ್ ಅಥವಾ ತಣ್ಣೀರನ್ನು ಕುಡಿಯಬಹುದು
