ಮೃತ ಸಾಕು ನಾಯಿಯ ಫೋಟೋ ಹೊತ್ತ ಆಟೋ ಚಾಲಕ: ಬೆಂಗಳೂರಿನಲ್ಲಿ ಹೃದಯಸ್ಪರ್ಶಿ ಘಟನೆ ವೈರಲ್

ಬೆಂಗಳೂರಿನ ಓರ್ವ ಆಟೋ ಚಾಲಕನೊಬ್ಬ ತನ್ನ ಮೃತ ಸಾಕು ನಾಯಿಯ ಭಾವಚಿತ್ರವನ್ನು ಆಟೋ ಮುಂಭಾಗದಲ್ಲಿ ಇಟ್ಟುಕೊಂಡು ಪ್ರತಿದಿನ ಸವಾರಿ ಮಾಡಿಸುತ್ತಿರುವ ಹೃದಯಸ್ಪರ್ಶಿ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಈ ದೃಶ್ಯಕ್ಕೆ ಮನಸೋತು ರೆಡ್ಡಿಟ್‌ನಲ್ಲಿ ಹಂಚಿಕೊಂಡ ಪೋಸ್ಟ್ ಇದೀಗ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಬೆಂಗಳೂರಿನ ಆಟೋ ಚಾಲಕನಿಗೆ ತನ್ನ ಸಾಕುಪ್ರಾಣಿಯ ಮೇಲಿದ್ದ ಪ್ರೀತಿ ಎಲ್ಲರ ಮನ ಮುಟ್ಟಿದೆ ಎಂದು ಅವರ ಪೋಸ್ಟ್‌ಗಳಿಂದ ಸ್ಪಷ್ಟವಾಗಿದೆ. ಈ ಪ್ರೀತಿಯ ಕಥೆಯನ್ನು ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿತ್ತು. ಪ್ರತಿದಿನ ತನ್ನ ಸತ್ತ ನಾಯಿಯ ಫೋಟೋವನ್ನು ಕೊಂಡೊಯ್ಯುವ ಆಟೋ ಚಾಲಕ ಎಂಬ ಶೀರ್ಷಿಕೆಯೊಂದಿಗೆ ‘ಇಂಡಿಯನ್ ಪೆಟ್ಸ್’ ಎಂಬ ಸಬ್‌ರೆಡ್ಡಿಟ್‌ನಲ್ಲಿ ಚಿತ್ರ ಮತ್ತು ಪೋಸ್ಟ್ ಹಂಚಿಕೊಳ್ಳಲಾಗಿದೆ.
ಪೋಸ್ಟ್‌ನಲ್ಲಿ ಏನಿದೆ?
ಬೆಂಗಳೂರಿನಲ್ಲಿ ಬೇಸಿಗೆ ಇಂಟರ್ನ್‌ಶಿಪ್ ಮಾಡುವಾಗ ಈ ಘಟನೆ ನಡೆದಿದೆ ಎಂದು ರೆಡ್ಡಿಟ್ ಬಳಕೆದಾರರೊಬ್ಬರು ಬರೆದಿದ್ದಾರೆ. ನಾನು ಆಟೋ ಬುಕ್ ಮಾಡಿದ್ದೆ, ಸ್ವಲ್ಪ ತಡವಾಗುತ್ತದೆ ಎಂದು ಚಾಲಕನಿಗೆ ಹೇಳಿದ್ದೆ. ನಾನು ಅಲ್ಲಿಗೆ ಹೋದಾಗ, ಅವರು ಬೀದಿ ನಾಯಿಗಳಿಗೆ ಬಿಸ್ಕೆಟ್ ಕೊಡುತ್ತಿದ್ದರು. ಅದು ಪಾರ್ಲೆ-ಜಿ ಆಗಿರಲಿಲ್ಲ. ನಂತರ, ಆಸಕ್ತಿದಾಯಕ ವಿಷಯವೆಂದರೆ, ಅವರು ತಮ್ಮ ಆಟೋದ ಮುಂಭಾಗದಲ್ಲಿ ನಾಯಿಯ ಫೋಟೋವನ್ನು ಅಂಟಿಸಿದ್ದರು. ಅದು ಒಂದು ತಿಂಗಳ ಹಿಂದೆ ಸತ್ತ ಅವರ ಪ್ರೀತಿಯ ಸಾಕುಪ್ರಾಣಿಯಾಗಿತ್ತು. ಆ ಮುದ್ದಾದ ನಾಯಿಗೆ ಕೇವಲ ನಾಲ್ಕು ತಿಂಗಳು ವಯಸ್ಸಾಗಿತ್ತು ಎಂದು ಅವರು ಬರೆದಿದ್ದಾರೆ.
ನಾನೊಬ್ಬ ಶ್ವಾನ ಪ್ರೇಮಿಯಾಗಿರುವುದರಿಂದ, ಆ ಕೆಲಸ ನನ್ನ ಮನಸ್ಸನ್ನು ಬಹಳವಾಗಿ ಮುಟ್ಟಿತು ಎಂದು ಪ್ರಯಾಣಿಕರು ಹೇಳಿದ್ದಾರೆ. ಪ್ರಯಾಣದ ಕೊನೆಯಲ್ಲಿ, ನಾಯಿಗಳಿಗೆ ಹೆಚ್ಚು ಬಿಸ್ಕೆಟ್ ಖರೀದಿಸಲು ನಾನು ಅವರಿಗೆ 100 ರೂಪಾಯಿ ಹೆಚ್ಚುವರಿಯಾಗಿ ನೀಡಿದೆ. ಮೊದಲು ಅವರು ನಿರಾಕರಿಸಿದರು, ಆದರೆ ಅದು ಅವರಿಗಲ್ಲ, ಅವರು ಆಹಾರ ನೀಡುವ ಆ ಮುಗ್ಧ ಜೀವಿಗಳಿಗೆ ಎಂದು ನಾನು ಒತ್ತಾಯಿಸಬೇಕಾಯಿತು ಎಂದು ಅವರು ಬರೆದಿದ್ದಾರೆ. ಕೊನೆಗೆ ಪ್ರಯಾಣಿಕರ ಒತ್ತಾಯಕ್ಕೆ ಮಣಿದು ಅವರು ಅದನ್ನು ತೆಗೆದುಕೊಂಡರು. ಇದು ಬಹಳ ಚಿಕ್ಕ ಪ್ರಯಾಣವಾಗಿದ್ದರೂ, ಅದು ನನ್ನ ಮನಸ್ಸನ್ನು ಬಹಳವಾಗಿ ಸೆಳೆಯಿತು ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.
ಹಲವು ಕಾಮೆಂಟ್‌ಗಳು:
ಈ ಪೋಸ್ಟ್‌ಗೆ ಸಾಮಾಜಿಕ ಮಾಧ್ಯಮ ಬಳಕೆದಾರರ ಪ್ರತಿಕ್ರಿಯೆಯೂ ಪ್ರೀತಿಯಿಂದ ತುಂಬಿತ್ತು. ಹೆಚ್ಚಿನ ಪೋಸ್ಟ್‌ಗಳು ಭಾವನಾತ್ಮಕ ಬೆಂಬಲವನ್ನು ಸೂಚಿಸುತ್ತಿದ್ದವು. ಕೆಲವರು ಆ ಚಾಲಕನ ನಂಬರ್ ಅಥವಾ ಇತರ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಬಹುದೇ ಎಂದು ಕೇಳಿದರು. ಹಾಗೆ ಮಾಡಿದರೆ, ಬೆಂಗಳೂರಿನಲ್ಲಿರುವಾಗ ಅವರ ಆಟೋವನ್ನು ಕರೆದು ಅವರಿಗೆ ಸಹಾಯ ಮಾಡಬಹುದಲ್ಲವೇ ಎಂದು ಒಬ್ಬರು ಬರೆದಿದ್ದಾರೆ. ಇಂತಹ ಜನರು ಸಮಾಜಕ್ಕೆ ಅಮೂಲ್ಯವಾದ ನಿಧಿ, ಅವರನ್ನು ಬೆಂಬಲಿಸಬೇಕು ಎಂದು ಇತರರು ಬರೆದಿದ್ದಾರೆ.
