ಆಡಿಯೋ ಟ್ವಿಸ್ಟ್: ಲವ್ ಬ್ರೇಕಪ್ ಅಲ್ಲ, ₹2000 ಕೈಸಾಲಕ್ಕೆ ರವಿ ಹತ್ಯೆ

ಆನೇಕಲ್: ಕೆಲಸದ ನಿಮಿತ್ತ ರಾಮನಗರಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದ ಯುವಕನ ಹತ್ಯೆಗೆ ಟ್ವಿಸ್ಟ್ ಸಿಕ್ಕಿದೆ. ಮೊದಲು ಲವ್ ಬ್ರೇಕಪ್ ವಿಚಾರಕ್ಕೆ ಕೊಲೆ ನಡೆದಿದೆ ಎನ್ನಲಾಗಿತ್ತು. ಆದರೆ ಆರೋಪಿಗಳು ಅರೆಸ್ಟ್ ಆದ ಬೆನ್ನಲ್ಲೇ ವೈರಲ್ ಆಗಿರುವ ಆಡಿಯೋ ಬೇರೆಯದೇ ಕಥೆ ಹೇಳುತ್ತಿದೆ.

ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ವಿನಾಯಕ ನಗರದಲ್ಲಿ ಶುಕ್ರವಾರ ರಾತ್ರಿ ರವಿ ಕುಮಾರ್ ಕೊಲೆಯಾಗಿತ್ತು. ಆರಂಭದಲ್ಲಿ ಯುವಕ ರವಿ ಕೊಲೆಗೆ ಯುವತಿಯೊಬ್ಬಳ ಜೊತೆಗಿನ ಲವ್ ಬ್ರೇಕಪ್ ಕಾರಣ ಎನ್ನಲಾಗಿತ್ತು. ಪ್ರಕರಣದ ಆರೋಪಿಗಳಾದ ಆನೇಕಲ್ ಪಟ್ಟಣದ ಮನೋಜ್, ಸೋಲೂರಿನ ಮನೀಷ್ ಮತ್ತು ಮನ್ಮಥ ಅರೆಸ್ಟ್ ಆದ ಬೆನ್ನಲ್ಲೇ ಆಡಿಯೋ ವೈರಲ್ ಆದ ಬಳಿಕ, ಕೊಲೆಗೆ ಕೇವಲ 2 ಸಾವಿರ ರೂ. ಕಾರಣ ಎಂಬುದು ಬಯಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಮನ್ಮಥ ತನ್ನ ಸ್ನೇಹಿತನ ಜೊತೆ ನಡೆಸಿರುವ ಸಂಭಾಷಣೆಯ ಆಡಿಯೋ ಇದಾಗಿದ್ದು, ಕೇವಲ ಎರಡು ಸಾವಿರ ಹಣದ ವಿಚಾರ ಮಾತನಾಡಲು ಮನೀಷ್ ಮತ್ತು ಮನೋಜ್ನನ್ನು ಕರೆದೊಯ್ದಿದ್ದೆ. ಆದರೆ ಮನೀಷ್ ಮತ್ತು ಮನೋಜ್ ಕಾರ್ಪೆಂಟರ್ ಅಂಗಡಿ ಬಳಿ ಸಿಕ್ಕ ರೀಪ್ ಪೀಸ್ ಮತ್ತು ದೊಣ್ಣೆಯಿಂದ ಹಲ್ಲೆ ಮಾಡಿದರು. ತಡೆಯಲು ಕೂಡ ಅವಕಾಶ ನೀಡಲಿಲ್ಲ ಎಂದು ಕೃತ್ಯದ ಇಂಚಿಂಚೂ ಮಾಹಿತಿಯನ್ನು ಆರೋಪಿ ಮನ್ಮಥ ಬಿಚ್ಚಿಟ್ಟಿದ್ದಾನೆ.
ಮನ್ಮಥನ ತಮ್ಮ ನಂದನ್ ಬಳಿ ಹತ್ಯೆಯಾದ ರವಿ ಕುಮಾರ್ 2 ಸಾವಿರ ಕೈಸಾಲ ಪಡೆದಿದ್ದ. ಹಲವು ಸಲ ಕೇಳಿದ್ರೂ, ಕೊಡದೇ ಸತಾಯಿಸಿಸುತ್ತಿದ್ದ. ಈ ವಿಚಾರವನ್ನು ನಂದನ್ ಅಣ್ಣನಿಗೆ ತಿಳಿಸಿದ್ದ. ಇದೇ ವಿಚಾರ ಮಾತನಾಡಲು ಮನೀಷ್ ಮತ್ತು ಮನೋಜ್ನನ್ನು ರವಿ ಬಳಿ ಕರೆದೊಯ್ದಾಗ ಕೊಲೆ ನಡೆದಿದೆ ಎಂಬ ವಿಚಾರ ಬಯಲಾಗಿದೆ
