ಮಂಗಳೂರು ಜೈಲಿನಲ್ಲಿ 5ಜಿ ಜಾಮರ್ ನಿಷ್ಕ್ರಿಯಗೊಳಿಸಲು ಕೈದಿಗಳ ಯತ್ನ – 9 ಮಂದಿ ವಿರುದ್ಧ ಪ್ರಕರಣ ದಾಖಲು!

ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಲಾಗಿದ್ದ 5ಜಿ ಜಾಮರ್ ಉಪಕರಣಗಳ ಮೇಲೆ ಉಪ್ಪು ಸುರಿದು ನಿಷ್ಕ್ರಿಯಗೊಳಿಸಲು ಯತ್ನಿಸಿದ 9 ಮಂದಿ ಕೈದಿಗಳ ವಿರುದ್ಧ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೈಲಿನಲ್ಲಿ ಈ ಮೊದಲು 2ಜಿ/3ಜಿ ಮಾದರಿಯ ಮೊಬೈಲ್ ಜಾಮರ್ ಇತ್ತು. ಇತ್ತೀಚೆಗೆ ಅದನ್ನು 5ಜಿ ಆಗಿ ಮೇಲ್ದರ್ಜೆಗೇರಿಸಲು ಟಿಐಸಿಎಲ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದ್ದು, ಇದರಂತೆ ಸಂಸ್ಥೆ 5ಜಿ ಜಾಮರ್ ಉಪಕರಣಗಳನ್ನು ಅಳವಡಿಸಿದ್ದರು.ಈ ನಡುವೆ ಜೈಲಿನ ‘ಎ’ ಮತ್ತು ‘ಬಿ’ ವಿಭಾಗಗಳಲ್ಲಿ ಅಳವಡಿಸಲಾಗಿದ್ದ ಜಾಮರ್ ಉಪಕರಣಗಳನ್ನು ಉಪ್ಪು ಸುರಿದು ಕೈದಿಗಳು ಕೆಡಿಸಲು ಪ್ರಯತ್ನ ಪಟ್ಟಿದ್ದು, ಈ ಬಗ್ಗೆ ಸಂಸ್ಥೆಯವರು ಕಾರಾಗೃಹ ಮತ್ತು ಸುಧಾರಣ ಸೇವೆ ಇಲಾಖೆಯ ಮಹಾನಿರ್ದೇಶಕರಿಗೆ ವರದಿ ನೀಡಿದ್ದಾರೆ. ವರದಿಯ ಆಧಾರದಲ್ಲಿ ಜೈಲಿನ ಅಧೀಕಕ್ಷ ಎಂ.ಎಚ್. ಆಶೇಖಾನ್ ಅವರು ಬರ್ಕೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.