ನಟಾಂಝ್ ಪರಮಾಣು ನೆಲೆ ಮೇಲೆ ದಾಳಿ; ಪುನರ್ನಿರ್ಮಾಣಕ್ಕೆ ಇರಾನ್ ಅಧ್ಯಕ್ಷರ ಪ್ರತಿಜ್ಞೆ

ಟೆಹ್ರಾನ್/ವಿಯೆನ್ನಾ: ಇತ್ತೀಚಿನ ಅಮೆರಿಕ ಮತ್ತು ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಗಳ ಸಂದರ್ಭದಲ್ಲೇ ಇರಾನ್ ನಟಾಂಝ್ ಪರಮಾಣು ನೆಲೆಯ ಮೇಲೆ ದಾಳಿ ನಡೆದಿದೆ ಎಂದು ಇರಾನ್ ಸರ್ಕಾರ ತಿಳಿಸಿದೆ. ಈ ವಿಷಯವನ್ನು ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆಯಾದ ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆ (IAEA)ಯ ಆಡಳಿತ ಮಂಡಳಿಯ ಸಭೆಯಲ್ಲಿ ಇರಾನ್ನ ರಾಯಭಾರಿ ರೆಝಾ ನಜಾಫಿ ಸೋಮವಾರ ಪ್ರಸ್ತಾಪಿಸಿದರು ಎಂದು ವರದಿಯಾಗಿದೆ.
IAEAಯ 35 ರಾಷ್ಟ್ರಗಳ ಆಡಳಿತ ಮಂಡಳಿಯ ಸಭೆಯಲ್ಲಿ ಮಾತನಾಡಿದ ನಜಾಫಿ, “ಮತ್ತೊಮ್ಮೆ ಅವರು ಇರಾನ್ನ ಶಾಂತಿಯುತ ಮತ್ತು ಸುರಕ್ಷಿತ ಪರಮಾಣು ಸೌಲಭ್ಯಗಳ ಮೇಲೆ ದಾಳಿ ಮಾಡಿದ್ದಾರೆ” ಎಂದು ಆರೋಪಿಸಿದರು. ಯಾವ ತಾಣ ಗುರಿಯಾಗಿತ್ತು ಎಂಬ ಪ್ರಶ್ನೆಗೆ ಅವರು “ನಟಾಂಝ್” ಎಂದು ಸ್ಪಷ್ಟಪಡಿಸಿದರು.

ಇರಾನ್ನ ಪರಮಾಣು ಕಾರ್ಯಕ್ರಮದ ಕುರಿತು ಉದ್ವಿಗ್ನತೆ ತಾರಕಕ್ಕೇರುತ್ತಿರುವ ಸಂದರ್ಭದಲ್ಲೇ ಈ ದಾಳಿ ನಡೆದಿದೆ. ಜೂನ್ ನಲ್ಲಿ ಯುನೈಟೆಡ್ ಸ್ಟೇಟ್ಸ್ ಇರಾನಿನ ಕೆಲ ಪರಮಾಣು ತಾಣಗಳ ಮೇಲೆ ದಾಳಿ ನಡೆಸಿತ್ತು. ವಾಷಿಂಗ್ಟನ್, ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದೆ. ಆದರೆ ಟೆಹ್ರಾನ್ ತನ್ನ ಪರಮಾಣು ಚಟುವಟಿಕೆಗಳು ಸಂಪೂರ್ಣವಾಗಿ ನಾಗರಿಕ ಉದ್ದೇಶಗಳಿಗಾಗಿ ಮಾತ್ರವೆಂದು ನಿರಂತರವಾಗಿ ವಾದಿಸುತ್ತಿದೆ.
ಈ ಬೆಳವಣಿಗೆಯ ನಡುವೆಯೇ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಚಿಯನ್, ಹಾನಿಗೊಳಗಾದ ಮೂಲಸೌಕರ್ಯವನ್ನು ಶೀಘ್ರದಲ್ಲಿ ಪುನರ್ನಿಮಿ್ರಸಲಾಗುವುದು ಎಂದು ಘೋಷಿಸಿದ್ದಾರೆ. ಇರಾನ್ ಪರಮಾಣು ಶಕ್ತಿ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಜ್ಯ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕಟ್ಟಡಗಳು ಮತ್ತು ಕಾರ್ಖಾನೆಗಳನ್ನು ನಾಶಮಾಡುವುದರಿಂದ ನಮ್ಮ ಕಾರ್ಯತಂತ್ರಕ್ಕೆ ಯಾವುದೇ ಅಡ್ಡಿಯಿಲ್ಲ. ನಾವು ಅದನ್ನು ಇನ್ನಷ್ಟು ಶಕ್ತಿಯೊಂದಿಗೆ ಪುನರ್ನಿಮಿ್ರಸುತ್ತೇವೆ” ಎಂದು ಹೇಳಿದರು.

“ನಮ್ಮ ಪರಮಾಣು ಚಟುವಟಿಕೆಗಳು ಜನರ ಸಮಸ್ಯೆಗಳನ್ನು ಪರಿಹರಿಸಲು, ರೋಗಗಳ ಚಿಕಿತ್ಸೆಗಾಗಿ ಮತ್ತು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಉದ್ದೇಶಿತವಾಗಿವೆ. ನಾವು ಪರಮಾಣು ಶಸ್ತ್ರಾಸ್ತ್ರಗಳನ್ನು ಹುಡುಕುತ್ತಿಲ್ಲ” ಎಂದು ಪೆಜೆಶ್ಚಿಯನ್ ಸ್ಪಷ್ಟಪಡಿಸಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಜೂನ್ನಲ್ಲಿ ಬಾಂಬ್ ದಾಳಿಗೊಳಗಾದ ಸೌಲಭ್ಯಗಳನ್ನು ಪುನರಾರಂಭಿಸಲು ಇರಾನ್ ಪ್ರಯತ್ನಿಸಿದರೆ ಹೊಸ ದಾಳಿಗೆ ಆದೇಶಿಸುವುದಾಗಿ ಎಚ್ಚರಿಸಿದ್ದಾರೆ.
ಇದರ ನಡುವೆ IAEA ಮಹಾನಿರ್ದೇಶಕ ರಾಫೆಲ್ ಮರಿಯಾನೋ ಗ್ರೂಸ್ಸಿ ಪರಿಸ್ಥಿತಿಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. “ವಿಕಿರಣ ಬಿಡುಗಡೆಯ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ” ಎಂದು ಅವರು ಎಚ್ಚರಿಸಿದರು.
IAEA ಆಡಳಿತ ಮಂಡಳಿಯ ಸಭೆಯಲ್ಲಿ ಮಾತನಾಡಿದ ಗ್ರೂಸ್ಸಿ “ಪ್ರಸ್ತುತ ಪರಿಸ್ಥಿತಿ ಅತ್ಯಂತ ಕಳವಳಕಾರಿ. ವಿಕಿರಣ ಸೋರಿಕೆ ಸಂಭವಿಸಿದರೆ ಪ್ರಮುಖ ನಗರಗಳಿಗಿಂತ ದೊಡ್ಡ ಪ್ರದೇಶಗಳನ್ನು ಸ್ಥಳಾಂತರಿಸುವ ಅಗತ್ಯವೂ ಉಂಟಾಗಬಹುದು” ಎಂದು ಹೇಳಿದರು.
ಈ ಪ್ರದೇಶದಲ್ಲಿನ ಪರಮಾಣು ಹಾಗೂ ವಿಕಿರಣ ವಸ್ತುಗಳ ಸ್ವರೂಪ ಮತ್ತು ಸ್ಥಳಗಳ ಬಗ್ಗೆ ಸಂಸ್ಥೆಗೆ ಸಮಗ್ರ ಮಾಹಿತಿ ಇರುವುದಾಗಿ ತಿಳಿಸಿದ ಅವರು, ದಾಳಿ ಅಥವಾ ಅಪಘಾತದಿಂದ ವಿಕಿರಣ ಸೋರಿಕೆ ಸಂಭವಿಸಿದರೆ ತಾಂತ್ರಿಕ ಹಾಗೂ ತುರ್ತು ಸಹಾಯ ಒದಗಿಸಲು IAEA ಸಿದ್ಧವಾಗಿದೆ ಎಂದು ಹೇಳಿದರು.
ಪಶ್ಚಿಮ ಏಷ್ಯಾದ ಹಲವು ದೇಶಗಳು ಪರಮಾಣು ವಿದ್ಯುತ್ ಸ್ಥಾವರಗಳು ಅಥವಾ ಸಂಶೋಧನಾ ರಿಯಾಕ್ಟರ್ ಗಳನ್ನು ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಮಿಲಿಟರಿ ಉದ್ವಿಗ್ನತೆಯ ನಡುವೆ ಯಾವುದೇ ದಾಳಿ ಅಪಾಯವನ್ನು ಹೆಚ್ಚಿಸಬಹುದು ಎಂದು ಪ್ರೊಸ್ಸಿ ಎಚ್ಚರಿಸಿದರು. ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಅತ್ಯಂತ ಸಂಯಮ ವಹಿಸುವಂತೆ ಅವರು ಒತ್ತಾಯಿಸಿದರು.