ಧಾರವಾಡದಲ್ಲಿ ಪಿಒಪಿ ಗಣೇಶ ವಿಗ್ರಹಗಳ ಮೇಲೆ ದಾಳಿ

ಧಾರವಾಡ: ಗಣೇಶ ಹಬ್ಬ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆ ಪಿಒಪಿ ಗಣೇಶ ವಿಗ್ರಹಗಳ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ.

ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ಧಾರವಾಡ ನಗರದ ಗಾಂಧಿ ಚೌಕ ಪ್ರದೇಶದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ಜಗದೀಶ ಐ.ಹೆಚ್.
ಅವರ ನೇತೃತ್ವದಲ್ಲಿ ಪಾಲಿಕೆ ಮತ್ತು ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ಮಾಡಿ 10 ಕ್ಕೂ ಹೆಚ್ಚು ಅಂಗಡಿಗಳನ್ನು ತಪಾಸಣೆ ಮಾಡಿದ್ದಾರೆ.
ಅಧಿಕಾರಿಗಳ ಅನಿರೀಕ್ಷಿತ ದಾಳಿಯಿಂದಾಗಿ ಗಾಂಧಿ ಚೌಕದಲ್ಲಿರುವ ಸಂತೋಷ್ ಚವ್ಹಾಣ ಅವರ ಗಣೇಶ ವಿಗ್ರಹ ಮಾರಾಟ ಅಂಗಡಿಯಲ್ಲಿ 10 ಕ್ಕೂ ಹೆಚ್ಚು ಪಿಒಪಿ ಗಣೇಶ ವಿಗ್ರಹಗಳು ಪತ್ತೆಯಾಗಿವೆ. ಇವುಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು ಮಹಾನಗರಪಾಲಿಕೆಯ ಸಿಬ್ಬಂದಿಗಳ ವಶಕ್ಕೆ ನೀಡಿದರು.
ಈ ಸಂದರ್ಭದಲ್ಲಿ ತಪಾಸಣೆ ಮಾಡಿದ ವಿವಿಧ ಮಾರಾಟ ಅಂಗಡಿಗಳಿಂದ ಗಣೇಶ ವಿಗ್ರಹಗಳ ಮಾದರಿ(ಶ್ಯಾಂಪಲ್)ಗಳನ್ನು ಪಡೆದು, ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು.
ದಿಢೀರ್ ದಾಳಿ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಪರಿಸರ ಅಭಿಯಂತರರಾದ ಸರೋಜಾ ಪೂಜಾರ, ಹಿರಿಯ ಆರೋಗ್ಯ ನಿರೀಕ್ಷಕ ಶಾಂತಗೌಡ ಬಿರಾದಾರ, ಆರೋಗ್ಯ ನಿರೀಕ್ಷಕ ವಿದ್ಯಾಶ್ರೀ ಬಡಿಗೇರ, ಮುನಾಫ್ ಸೌದಾಗರ್, ಶಶಿಧರ್ ಕೋಡಿಹಳ್ಳಿ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
