ಜಾಲಹಳ್ಳಿಯಲ್ಲಿ ಎಟಿಎಂ ಕ್ಯಾಶ್ ಲೂಟಿ: ಪ್ಲಾಸ್ಟಿಕ್ ವಸ್ತುವನ್ನು ಬಳಸಿ ಕಳ್ಳತನ”

ಬೆಂಗಳೂರು : ಬೆಂಗಳೂರಿನ ಜಾಲಹಳ್ಳಿ ಶಾಖೆಯ ಕೆನರಾ ಬ್ಯಾಂಕ್‌ನ ಎಟಿಎಂನಲ್ಲಿ ದುಷ್ಕರ್ಮಿಯೊಬ್ಬ ಪ್ಲಾಸ್ಟಿಕ್ ವಸ್ತುವನ್ನು ಅಂಟಿಸಿ ಗ್ರಾಹಕರ ಹಣವನ್ನು ಲೂಟಿ ಮಾಡಿರುವ ಘಟನೆ ನಡೆದಿದೆ. ಈ ಕುರಿತು ಬ್ಯಾಂಕ್ ಮ್ಯಾನೇಜರ್ ಕೃಪಾ ಆರ್.ಅವರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೆನರಾ ಬ್ಯಾಂಕ್‌ನ ಜಾಲಹಳ್ಳಿ ಶಾಖೆಯ ಮ್ಯಾನೇಜರ್ ಕೃಪಾ ಆರ್. ಅವರು ದೂರಿನಲ್ಲಿ ತಿಳಿಸಿರುವ ಪ್ರಕಾರ, ಟಿ. ದಾಸರಹಳ್ಳಿಯ ಎಸ್.ಎಂ. ರಸ್ತೆಯಲ್ಲಿರುವ ಎಟಿಎಂ ಮಶೀನಿನಲ್ಲಿ ಮೋಸದ ಘಟನೆ ನಡೆದಿದೆ. ಒಬ್ಬ ಗ್ರಾಹಕರು ಎಟಿಎಂನಲ್ಲಿ 6,500 ರೂಪಾಯಿಗಳನ್ನು ಡ್ರಾ ಮಾಡಿದ್ದರು, ಆದರೆ ಅವರಿಗೆ ಕೇವಲ 4,500 ರೂಪಾಯಿಗಳು ಮಾತ್ರ ಲಭ್ಯವಾದವು. ಉಳಿದ 2,000 ರೂಪಾಯಿಗಳು ಬರಲಿಲ್ಲ. ಇದೇ ರೀತಿ, ಮತ್ತೊಬ್ಬ ಗ್ರಾಹಕರು 40,000 ರೂಪಾಯಿಗಳನ್ನು ಡ್ರಾ ಮಾಡಿದಾಗ ಕೇವಲ 30,000 ರೂಪಾಯಿಗಳು ಮಾತ್ರ ಬಂದಿದ್ದು, 10,000 ರೂಪಾಯಿಗಳು ಕಾಣೆಯಾಗಿವೆ ಎಂದು ದೂರಲಾಗಿದೆ.
ಬ್ಯಾಂಕ್ ಸಿಬ್ಬಂದಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅಪರಿಚಿತ ವ್ಯಕ್ತಿಯೊಬ್ಬ ಎಟಿಎಂ ಮಶೀನಿನಲ್ಲಿ ಪ್ಲಾಸ್ಟಿಕ್ ವಸ್ತುವನ್ನು ಅಂಟಿಸಿ ಟ್ಯಾಂಪರಿಂಗ್ ಮಾಡಿರುವುದು ಬೆಳಕಿಗೆ ಬಂದಿದೆ. ಈ ಪ್ಲಾಸ್ಟಿಕ್‌ಗೆ ಗಮ್ ಇದ್ದು, ಗ್ರಾಹಕರು ಡ್ರಾ ಮಾಡಿದ ಹಣವು ಇದಕ್ಕೆ ಅಂಟಿಕೊಂಡು ಉಳಿಯುತ್ತಿತ್ತು. ಗ್ರಾಹಕರು ಎಟಿಎಂನಿಂದ ಹೊರಟು ಹೋದ ಬಳಿಕ, ದುಷ್ಕರ್ಮಿಯು ಯಾರೂ ಇಲ್ಲದ ಸಮಯದಲ್ಲಿ ಬಂದು ಈ ಪ್ಲಾಸ್ಟಿಕ್‌ಗೆ ಅಂಟಿಕೊಂಡಿದ್ದ ಹಣವನ್ನು ತೆಗೆದುಕೊಂಡು ಪರಾರಿಯಾಗುತ್ತಿದ್ದ ಎಂದು ತಿಳಿದುಬಂದಿದೆ.
ಈ ಘಟನೆ ಕುರಿತು ಕಾನೂನು ಕ್ರಮ ಕೈಗೊಳ್ಳಲು ಮ್ಯಾನೇಜರ್ ಕೃಪಾ ಆರ್. ಅವರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ಇನ್ಸ್ಪೆಕ್ಟರ್ ಹನುಮಂತರಾಜು ಅವರ ಮಾರ್ಗದರ್ಶನದಲ್ಲಿ ತನಿಖೆಯನ್ನು ಆರಂಭಿಸಿದ್ದಾರೆ. ದುಷ್ಕರ್ಮಿಯನ್ನು ಪತ್ತೆಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆಯನ್ನು ಚುರುಕುಗೊಳಿಸಲಾಗಿದೆ.
