“ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದು ತಪ್ಪು; ಮಗನಿಂದ ತಪ್ಪಾಗಿದ್ದರೆ ಕ್ಷಮೆ ಕೇಳಿಸುತ್ತೇನೆ” – ವಿಜೂಗೌಡ ಪಾಟೀಲ್

ಬೆಂಗಳೂರು: ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ನನ್ನ ಮಗನಿಂದ ತಪ್ಪಾಗಿದ್ದರೆ ಕ್ಷಮೆ ಕೇಳಿಸುತ್ತೇನೆ ಎಂದು ಬಿಜೆಪಿ (BJP) ಮುಖಂಡ ವಿಜೂಗೌಡ ಪಾಟೀಲ್ (Vijugouda Patil) ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಕನ್ನೊಳ್ಳಿ ಗ್ರಾಮದ ಬಳಿಯಿರುವ ಟೋಲ್ ಬಳಿ ಟೋಲ್ ಹಣ ಪಾವತಿಸಲು ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಪುತ್ರ ಸಮರ್ಥಗೌಡ ಪಾಟೀಲ್ ಹಾಗೂ ಆತನ ಸ್ನೇಹಿತರು ಹಲ್ಲೆ ಮಾಡಿದ ಪ್ರಕರಣದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗ ಟೋಲ್ ಬಳಿ ಹೋಗಿದ್ದು ನಿಜ. ಟೋಲ್ನಲ್ಲಿದ್ದ ಸಿಬ್ಬಂದಿ ಯಾರ ವಾಹನ ಅಂತ ಕೇಳಿದ್ದಾರೆ. ನಾನು ವಿಜೂಗೌಡ ಅವರ ಮಗ ಅಂತ ಹೇಳಿದ್ದಾನೆ. ಯಾವ ವಿಜೂಗೌಡ? ಅವರ ಮಗ ಆದ್ರೆ ಏನಂತೆ ಟೋಲ್ ಕಟ್ಟಿ ಹೋಗಬೇಕು ಅಂತ ಹೇಳಿದ್ದಾರೆ ಎಂದು ವಿವರಿಸಿದ್ದಾರೆ
ನಾವು ಅಲ್ಲಿ ದಿನ ಹೋಗೋದು ಬರೋದು ಮಾಡುತ್ತೇವೆ. ನಮ್ಮನ್ನ ಗುರುತು ಹಿಡಿಬೇಕು ಅಂತ ಹೇಳಿದ್ದಾನೆ. ನನ್ನ ಮಗ ಹೊಡೆದಿಲ್ಲ. ಹಿಂದಿನಿಂದ ಬಂದು ಅವನ ಸ್ನೇಹಿತರೆಲ್ಲ ಸೇರಿ ಹೊಡೆದಿದ್ದಾರೆ. ನನ್ನ ಮಗ ಜಗಳ ಬಿಡಿಸಲು ಹೋಗಿದ್ದಾನೆ ಅಷ್ಟೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಎಲ್ಲರೂ ಟೋಲ್ ಕಟ್ಟಲೇಬೇಕು. ಕಟ್ಟುವುದಿಲ್ಲ ಅಂತ ನನ್ನ ಮಗ ಹೇಳಿಲ್ಲ. ಆದರೆ ಯಾರದ್ರೂ ತಂದೆ ಬಗ್ಗೆ ಮಾತನಾಡಿದರೆ ಕೋಪ ಬರುತ್ತದೆ ಅಲ್ವಾ? ಹಾಗಾಗಿ ನನ್ನ ಮಗ ಕೋಪದಿಂದ ಮಾತನಾಡಿದ್ದಾನೆ. ಈ ವಿಚಾರದಲ್ಲಿ ನಾನು ನನ್ನ ಮಗನನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ ಎಂದಿದ್ದಾರೆ.
ಯಾರೆಲ್ಲ ಹಲ್ಲೆ ಮಾಡಿದ್ದಾರೆ ಅವರೆಲ್ಲರಿಗೂ ನಾನು ಬೈದಿದ್ದೇನೆ. ಅಲ್ಲದೇ ಕ್ಷಮಾಪಣೆ ಕೇಳಬೇಕು ಅಂತ ಹೇಳಿದ್ದೇನೆ. ಯಾರೂ ತಪ್ಪು ಮಾಡಿದ್ರೂ ಕ್ಷಮೆ ಕೇಳಬೇಕು. ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವುದು ತಪ್ಪು ಎಂದು ಹೇಳಿದ್ದಾರೆ.
ಉಪ್ಪು ತಿಂದವರೂ ನೀರು ಕುಡಿಯಲೇ ಬೇಕು. ತಪ್ಪು ಯಾರೇ ಮಾಡಿದ್ರೂ ಅದು ತಪ್ಪೇ. ನನ್ನ ಮಗ ತಪ್ಪು ಮಾಡಿದ್ರೆ ಕ್ಷಮೆ ಕೇಳಿಸುತ್ತೇನೆ. ನನ್ನ ಮಗ ತಪ್ಪು ಮಾಡಿರುವ ಬಗ್ಗೆ ನನಗೆ ಇನ್ನೂ ಸಂಶಯವಿದೆ. ನಾನೇ ಖುದ್ದು ಸ್ಥಳಕ್ಕೆ ಹೋಗಿ ಯಾರು ತಪ್ಪು ಮಾಡಿದ್ದಾರೆ ಎಂದು ತಿಳಿದುಕೊಳ್ಳುತ್ತೇನೆ ಎಂದಿದ್ದಾರೆ.