ಅಸ್ಸಾಂ ಗಾಯಕ ಜುಬೀನ್ ಗಾರ್ಗ್ ಸಾವು ಪ್ರಕರಣ: ಮ್ಯಾನೇಜರ್ ಮತ್ತು ಸಂಘಟಕನ ವಿರುದ್ಧ ಕೊಲೆ ಪ್ರಕರಣ ದಾಖಲು, ಬಂಧನ

ಇತ್ತೀಚೆಗಷ್ಟೇ ನಿಧನರಾದ ಅಸ್ಸಾಂನ ಗಾಯಕ ಜುಬೀನ್ ಗಾರ್ಗ್ ಅವರ ಸಾವಿಗೆ ಸಂಬಂಧಿಸಿದಂತೆ ಈಗ ಅವರ ಬಹುಕಾಲ ಮ್ಯಾನೇಜರ್ ಹಾಗೂ ಸಿಂಗಾಪುರದಲ್ಲಿ ಕಾರ್ಯಕ್ರಮ ಆಯೋಜಿಸಿದ ಸಂಘಟಕರ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಗಾರ್ಗ್ ಅವರ ವ್ಯವಸ್ಥಾಪಕ ಸಿದ್ಧಾರ್ಥ್ ಶರ್ಮಾ ಮತ್ತು ಈಶಾನ್ಯ ಭಾರತ ಉತ್ಸವ(ನಾರ್ತ್ ಈಸ್ಟ್ ಇಂಡಿಯಾ) ಫೆಸ್ಟಿವಲ್‌ನ ಮುಖ್ಯ ಸಂಘಟಕ ಶ್ಯಾಮಕಾನು ಮಹಾಂತ ಅವರನ್ನು ಬುಧವಾರ ಪೊಲೀಸರು ಬಂಧಿಸಿದ್ದರು. ಸಿಂಗಾಪುರದಿಂದ ಬಂದ ನಂತರ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಶ್ಯಾಮಕಾನು ಮಹಾಂತ ಅವರನ್ನು ಬಂಧಿಸಲಾಗಿದೆ. ಮ್ಯಾನೇಜರ್ ಸಿದ್ಧಾರ್ಥ್ ಶರ್ಮಾ ಅವರನ್ನು ಗುರುಗ್ರಾಮ್‌ನ ಅವರ ಮನೆಯಲ್ಲಿ ಬಂಧಿಸಲಾಗಿದೆ. ಬಂಧನದ ನಂತರ ಇಬ್ಬರನ್ನು ಬಿಗಿಭದ್ರತೆಯಲ್ಲಿ ಗುವಾಹಟಿಗೆ ಕರೆದೊಯ್ಯಲಾಗಿದ್ದು, ಅಲ್ಲಿನ ನ್ಯಾಯಾಲಯವೂ ಅವರಿಗೆ 14 ದಿನಗಳ ಕಸ್ಟಡಿ ವಿಧಿಸಿದೆ.
ಸಂಘಟಕ, ಮ್ಯಾನೇಜರ್‌ಗೆ ಪೊಲೀಸ್ ಕಸ್ಟಡಿ
ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದ್ದು, ಹೆಚ್ಚಿನ ವಿವರಗಳನ್ನು ಈಗ ಹೇಳಲು ಸಾಧ್ಯವಿಲ್ಲ. ನಾವು ಈಗ ಎಫ್‌ಐಆರ್‌ನಲ್ಲಿ ಬಿಎನ್‌ಎಸ್‌ನ ಸೆಕ್ಷನ್ 103 ಅನ್ನು ಸೇರಿಸಿದ್ದೇವೆ ಎಂದು ಅಸ್ಸಾಂ ಪೊಲೀಸರ ಅಪರಾಧ ತನಿಖಾ ಇಲಾಖೆಯ (ಸಿಐಡಿ) ವಿಶೇಷ ಡಿಜಿಪಿ ಮುನ್ನಾ ಪ್ರಸಾದ್ ಗುಪ್ತಾ ಸುದ್ದಿಗಾರರಿಗೆ ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಆದರೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 103 ಕೊಲೆ ಶಿಕ್ಷೆಗೆ ಸಂಬಂಧಿಸಿದೆ, ದಂಡದ ಜೊತೆಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯನ್ನು ಸೂಚಿಸುತ್ತದೆ. ಶರ್ಮಾ ಮತ್ತು ಮಹಾಂತ ಅವರ ವಿರುದ್ಧ ಕೊಲೆಗೆ ಸಮಾನವಲ್ಲದ ಅಪರಾಧಿಕ ನರಹತ್ಯೆ, ಕ್ರಿಮಿನಲ್ ಪಿತೂರಿ ಮತ್ತು ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವ ವಿಭಾಗಗಳ ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಗಿದೆ.
ಅಸ್ಸಾಂನ ಸಾಂಸ್ಕೃತಿಕ ರಾಯಭಾರಿ ಎನಿಸಿದ ಜುಬೀನ್ ಗರ್ಗ್ ಸೆಪ್ಟೆಂಬರ್ 19 ರಂದು ಈಶಾನ್ಯ ಭಾರತ ಉತ್ಸವ ಪ್ರಾರಂಭವಾಗುವ ಒಂದು ದಿನ ಮೊದಲು ಮೃತಪಟ್ಟಿದ್ದರು. ಭಾರತ ಸಿಂಗಾಪುರದ ರಾಜತಾಂತ್ರಿಕ ಸಂಬಂಧಗಳ 60 ನೇ ವರ್ಷವನ್ನು ಗುರುತಿಸಲು ಮತ್ತು ಉತ್ಸವದ ಮೂಲಕ ಭಾರತ ಆಸಿಯಾನ್ ಪ್ರವಾಸೋದ್ಯಮ ವರ್ಷವನ್ನು ಆಚರಿಸಲು ಅವರು ಸಿಂಗಾಪುರದಲ್ಲಿದ್ದರು. ಅಲ್ಲಿನ ಸೇಂಟ್ ಜಾನ್ಸ್ ದ್ವೀಪದಲ್ಲಿ ದುರಂತ ನಡೆದಿತ್ತು. ನೀರಿಗೆ ಬಿದ್ದ ಗಾರ್ಗ್ ಅವರನ್ನು ನೀರಿನಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿತು, ಆದರೆ ಅದೇ ದಿನ ಅವರು ಸಾವನ್ನಪ್ಪಿದರು.
ಸಿದ್ಧಾರ್ಥ್ ಶರ್ಮಾ ಮತ್ತು ಮಹಾಂತ ಅವರನ್ನು ಅಸ್ಸಾಂಗೆ ಕರೆತರಲಾಗಿದೆ. ಅವರ ಕೊನೆಯ ಕ್ಷಣಗಳಲ್ಲಿ ಅವರಿಗೆ ಏನಾಯಿತು ಎಂದು ತಿಳಿಯಲು ನಾವೆಲ್ಲರೂ ಕಾಯುತ್ತಿದ್ದೇವೆ. ತನಿಖಾ ತಂಡದ ಮೇಲೆ ಪೂರ್ಣ ನಂಬಿಕೆ ಇದೆ ಎಂದು ಅವರ ಪತ್ನಿ ಗರಿಮಾ ಸೈಕಿಯಾ ಗಾರ್ಗ್ ವರದಿಗಾರರಿಗೆ ತಿಳಿಸಿದ್ದಾರೆ. ಘಟನೆಗೆ ನಿಖರವಾದ ಕಾರಣವನ್ನು ಅವರು ಶೀಘ್ರದಲ್ಲೇ ಬಹಿರಂಗಪಡಿಸಲಿದ್ದಾರೆ ಎಂದು ಗರಿಮಾ ಆಶಿಸಿದರು. ಜುಬೀನ್ ಗಾರ್ಗ್ ಸಾವಿನ ತನಿಖೆಗಾಗಿ ಬಿಜೆಪಿ ನೇತೃತ್ವದ ಅಸ್ಸಾಂ ಸರ್ಕಾರ 10 ಸದಸ್ಯರ ತಂಡವನ್ನು ರಚಿಸಿದೆ. ವಿರೋಧ ಪಕ್ಷ ಕಾಂಗ್ರೆಸ್ ಕೂಡ ತನಿಖೆಗೆ ಒತ್ತಾಯಿಸಿ, ಕೇಂದ್ರ ತನಿಖಾ ದಳದಿಂದ ತನಿಖೆ ನಡೆಸಬೇಕೆಂದು ಸೂಚಿಸಿತ್ತು.