ಬಾಕಿ ಹಣ ಕೇಳಿದ್ದಕ್ಕೆ ಅಂಗಡಿ ಫ್ಲೆಕ್ಸ್‌ಗೆ ಬೆಂಕಿ: ಬೆಳ್ತಂಗಡಿಯಲ್ಲಿ ಆಕ್ರೋಶಿತ ಗ್ರಾಹಕನ ಕೃತ್ಯ

ಬೆಳ್ತಂಗಡಿ : ದಿನಸಿ ಅಂಗಡಿಯಲ್ಲಿ ಸಾಮಾನು ಖರೀದಿಸಿ ಹಣ ಬಾಕಿ ಇಟ್ಟಿದ್ದನ್ನು ಅಂಗಡಿಯಾತ ವಾಪಾಸ್ ಕೇಳಿದ್ದಕ್ಕೆ ಆರೋಪಿ ಅಂಗಡಿಯ ಪ್ಲೆಕ್ಸ್ ಬೆಂಕಿ ಹಚ್ಚಿದ ಘಟನೆ ಗುರುವಾಯನಕೆರೆಯಲ್ಲಿ ಜುಲೈ 10ರಂದು ಬೆಳಗ್ಗಿನ ಜಾವ ನಡೆದಿದೆ. ಸದ್ಯ ಆರೋಪಿಯಯನ್ನು ಬೆಳ್ತಂಗಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಬಳಂಜ ಗ್ರಾಮ ಕಟ್ಟೆ ನಿವಾಸಿ ಉಮೇಶ್ ಬಂಗೇರ(29) ಎಂದು ಗುರುತಿಸಲಾಗಿದೆ. ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿ ಸದಕತುಲ್ಲಾ ಎಂಬವರಿಗೆ ಸೇರಿದ ಜಿ.ಕೆ.ಸ್ಟೋರ್ ಹೆಸರಿನ ಅಂಗಡಿ ಬದಿಯಲ್ಲಿ ಇರಿಸಲಾಗಿದ್ದ ಜಾಹೀರಾತು ಫ್ಲೆಕ್ಸ್ ಗೆ ಜುಲೈ 10ರಂದು ಬೆಳಗ್ಗಿನ ಜಾವ ಬೆಂಕಿ ಹಚ್ಚಲಾಗಿತ್ತು. ಮಾಲಕ ಬೆಳಗ್ಗೆ ಅಂಗಡಿಗೆ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಗುರುವಾರ ಮುಂಜಾನೆ 5 ಗಂಟೆ ವೇಳೆ ಆರೋಪಿ ಉಮೇಶ್ ಬಂಗೇರ ಬೆಂಕಿ ಹಚ್ಚಿ ಓಡಿ ಹೋಗುತ್ತಿರುವುದು ಸೆರೆಯಾಗಿತ್ತು. ಇದರಿಂದ ಸುಮಾರು 3 ಸಾವಿರ ರೂ. ನಷ್ಟ ಉಂಟಾಗಿದೆ ಎಂದು ಅಂಗಡಿ ಮಾಲಕ ಸದಕತುಲ್ಲಾ ಬೆಳ್ತಂಗಡಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಉಮೇಶ್ ಬಂಗೇರನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹಿಂದೆ ಆರೋಪಿ ಹೊಟೇಲ್ ನಡೆಸುತ್ತಿದ್ದು, ಸದಕತುಲ್ಲಾರ ಅಂಗಡಿಯಿಂದ ಖರೀದಿಸಿದ್ದ ದಿನಸಿ ಸಾಮಗ್ರಿಗಳ 38 ಸಾವಿರದ ರೂ. ಬಾಕಿ ಇರಿಸಿಕೊಂಡಿದ್ದ. ಈ ಹಣವನ್ನು ಸದಕತುಲ್ಲಾ ಜು.9ರಂದು ಕೇಳಿದ್ದರು. ಇದರಿಂದ ಕೋಪಗೊಂಡು ಕೃತ್ಯ ಎಸಗಿರುವುದಾಗಿ ಉಮೇಶ್ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
