ಏಷ್ಯಾದ ಅತ್ಯಂತ ಹಿರಿಯ ಆನೆ ‘ವತ್ಸಲಾ’ ನಿಧನ: ಪನ್ನಾ ಹುಲಿ ಅಭಯಾರಣ್ಯದಲ್ಲಿ 100 ವರ್ಷದ ‘ದಾದಿ’ಗೆ ವಿದಾಯ!

ಭೋಪಾಲ್: ಏಷ್ಯಾದ ಅತ್ಯಂತ ಹಿರಿಯ ಆನೆ ‘ವತ್ಸಲಾ’ ಮಧ್ಯಪ್ರದೇಶದ ಪನ್ನಾ ಹುಲಿ ಅಭಯಾರಣ್ಯದಲ್ಲಿ ಮಂಗಳವಾರ (ಜು.8) ಅಸುನೀಗಿದೆ. ಆನೆಗೆ 100 ವರ್ಷಗಳಿಗೂ ಹೆಚ್ಚು ವಯಸ್ಸಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇರಳದ ನೀಲಂಬೂರು ಕಾಡಿನಿಂದ 1971ರಲ್ಲಿ ವತ್ಸಲಾಳನ್ನು ಮಧ್ಯಪ್ರದೇಶಕ್ಕೆ ಕರೆತರಲಾಗಿತ್ತು.
ಮೊದಲು ಆನೆಯನ್ನು ನರ್ಮದಾಪುರಂನಲ್ಲಿ ಇರಿಸಲಾಯಿತು ಇದಾದ ಬಳಿಕ ಪನ್ನಾ ಹುಲಿ ಅಭಯಾರಣ್ಯಕ್ಕೆ ಸ್ಥಳಾಂತರಿಸಲಾಯಿತು. ಅಂದಿನಿಂದ ಇಲ್ಲೇ ಬೆಳೆದ ವತ್ಸಲಾ ಹುಲಿ ಅಭಯಾರಣ್ಯದಲ್ಲಿರುವ ಇತರ ಆನೆಗಳಿಗೆ ನಾಯಕಿಯಾಗಿದ್ದಳು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವತ್ಸಲಾ:
ನೂರು ವರ್ಷಕ್ಕೂ ಅಧಿಕ ಕಾಲ ಜೀವನ ನಡೆಸಿದ ಆನೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿತ್ತು ಜೊತೆಗೆ ಕಾಲುಗಳಿಗೆ ಗಾಯಗಳಾಗಿದ್ದು ನಡೆದಾಡಲೂ ಕಷ್ಟಸಾಧ್ಯವಾಗಿತ್ತು ವೈದ್ಯರ ಸಮಾಲೋಚನೆಯಲ್ಲಿತ್ತು ಎನ್ನಲಾಗಿದೆ ಅದರಂತೆ ಮಂಗಳವಾರ ಹಿನೌಟಾ ಪ್ರದೇಶದ ಖೈರಾಯನ್ ಬಳಿಯ ಚರಂಡಿಯಲ್ಲಿ ಆನೆ ಬಿದ್ದಿತ್ತು ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಗೆ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಮಧ್ಯಾಹ್ನದ ವೇಳೆ ಕೊನೆಯುಸಿರೆಳೆದಿದೆ.
ಪ್ರವಾಸಿಗರ ಆಕರ್ಷಣೆ:
ಅತ್ಯಂತ ಹಿರಿಯ ಆನೆಯಾಗಿದ್ದರಿಂದ ವತ್ಸಲಾ ಪ್ರವಾಸಿಗರ ಆಕರ್ಷಣೆಯಾಗಿತ್ತು, ಅಲ್ಲದೆ ಅರಣ್ಯ ಇಲಾಖೆ ಸಿಬ್ಬಂದಿ ಈ ಆನೆಯನ್ನು ಪ್ರೀತಿಯಿಂದ ‘ದಾದಿ’ ಮತ್ತು ‘ದಾಯಿ ಮಾ’ ಎಂದು ಕರೆಯುತ್ತಿದ್ದರು.
ಸಿಎಂ ಸಂತಾಪ:
‘ವತ್ಸಲಾ’ ನಿಧನ ಹೊಂದಿದ ಕುರಿತು ಮಧ್ಯಪ್ರದೇಶ ಸಿಎಂ ಡಾ. ಮೋಹನ್ ಯಾದವ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಅಗಲಿದ ಹಿರಿಯ ಆನೆಯ ಕುರಿತು ಭಾವುಕ ನುಡಿಗಳನ್ನು ಹಂಚಿಕೊಂಡಿದ್ದಾರೆ.
