ಏಷ್ಯಾಕಪ್ ಟ್ರೋಫಿ ವಿವಾದ: ಪಾಕಿಸ್ತಾನವನ್ನು ಮಣಿಸಿದರೂ ಚಾಂಪಿಯನ್ ಭಾರತಕ್ಕೆ ಕಪ್ ಇಲ್ಲ; ಟ್ರೋಫಿ ಹಸ್ತಾಂತರಕ್ಕೆ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ನಿರಾಕರಣೆ!

2025 ರ ಏಷ್ಯಾಕಪ್ (Asia Cup) ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಸೂರ್ಯಕುಮಾರ್ ನೇತೃತ್ವದ ಭಾರತ ತಂಡ (India vs Pakistan) ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ ಈ ಟೂರ್ನಿ ನಡೆದು ತಿಂಗಳಾಗುತ್ತ ಬಂದರೂ ಚಾಂಪಿಯನ್ ಟೀಂ ಇಂಡಿಯಾಕ್ಕೆ ಮಾತ್ರ ಟ್ರೋಫಿಯನ್ನು ಎತ್ತಿಹಿಡಿಯುವ ಅವಕಾಶ ಸಿಕ್ಕಿಲ್ಲ. ಪಿಸಿಬಿ ಹಾಗೂ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ (Mohsin Naqvi) ಭಾರತ ತಂಡ ಟ್ರೋಫಿ ಸ್ವೀಕರಿಸಲು ನಿರಾಕರಿಸಿತ್ತು. ಇದರಿಂದ ಮುಜುಗರಕ್ಕೊಳಗಾಗಿರುವ ನಖ್ವಿ, ಏಷ್ಯಾಕಪ್ ಟ್ರೋಫಿಯನ್ನು ಭಾರತಕ್ಕೆ ನೀಡಲು ನಿರಾಕರಿಸಿದ್ದರು. ಹೀಗಾಗಿ ಟ್ರೋಫಿಯನ್ನು ಪ್ರಸ್ತುತ ಎಸಿಸಿ ಕಚೇರಿಯಲ್ಲಿ ಇರಿಸಲಾಗಿದೆ. ಇದೀಗ ಕೇಳಿಬಂದಿರುವ ಮಾಹಿತಿ ಪ್ರಕಾರ, ಬಿಸಿಸಿಐ (BCCI) ಮೊಹ್ಸಿನ್ ನಖ್ವಿಗೆ ಇಮೇಲ್ ಕಳುಹಿಸಿದ್ದು, ಟ್ರೋಫಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಒತ್ತಾಯಿಸಿದೆ. ಆದರೆ ನಖ್ವಿ ಮಾತ್ರ ಟ್ರೋಫಿ ಹಸ್ತಾಂತರಕ್ಕೆ ಒಲ್ಲೆ ಎಂದಿದ್ದಾರೆ. ಆದ್ದರಿಂದ ಬಿಸಿಸಿಐ ಈಗ ಈ ವಿಷಯವನ್ನು ಐಸಿಸಿಗೆ ಕೊಂಡೊಯ್ಯಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.

ಬಿಸಿಸಿಐ ವಿರುದ್ಧ ನಖ್ವಿ ಮೊಂಡುತನ
ಬಿಸಿಸಿಐ ಕಳುಹಿಸಿರುವ ಇಮೇಲ್ಗೆ ಉತ್ತರಿಸಿರುವ ಮೊಹ್ಸಿನ್ ನಖ್ವಿ, ದುಬೈನಲ್ಲಿರುವ ಎಸಿಸಿ ಪ್ರಧಾನ ಕಚೇರಿಯಿಂದ ಬಿಸಿಸಿಐ ಅಧಿಕಾರಿಯೊಬ್ಬರು ಟ್ರೋಫಿಯನ್ನು ಪಡೆಯಬೇಕು ಎಂದಿದ್ದಾರೆ ಎಂದು ವರದಿಯಾಗಿದೆ. ಆದರೆ ನಖ್ವಿ ಅವರ ಕೋರಿಕೆಯನ್ನು ಸ್ವೀಕರಿಸಲು ಬಿಸಿಸಿಐ ನಿರಾಕರಿಸಿದ್ದು, ಈ ವಿಷಯವನ್ನು ಈಗ ಐಸಿಸಿ ಸಭೆಯಲ್ಲಿ ಪ್ರಸ್ತಾಪಿಸುವ ಸಾಧ್ಯತೆಯಿದೆ. ‘ಬಿಸಿಸಿಐ ಕಾರ್ಯದರ್ಶಿ, ಬಿಸಿಸಿಐನ ಎಸಿಸಿ ಪ್ರತಿನಿಧಿ ರಾಜೀವ್ ಶುಕ್ಲಾ ಮತ್ತು ಶ್ರೀಲಂಕಾ ಕ್ರಿಕೆಟ್ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಇತರ ಸದಸ್ಯ ಮಂಡಳಿಗಳ ಪ್ರತಿನಿಧಿಗಳು ಕಳೆದ ವಾರ ಎಸಿಸಿ ಅಧ್ಯಕ್ಷರಿಗೆ ಭಾರತಕ್ಕೆ ಟ್ರೋಫಿಯನ್ನು ಹಸ್ತಾಂತರಿಸುವ ಬಗ್ಗೆ ಇಮೇಲ್ ಮಾಡಿದ್ದಾರೆ’ ಎಂದು ಎಸಿಸಿ ಮೂಲವೊಂದು ಪಿಟಿಐಗೆ ತಿಳಿಸಿದೆ. ವರದಿಯ ಪ್ರಕಾರ, ಬಿಸಿಸಿಐ ಅಧಿಕಾರಿಯೊಬ್ಬರು ದುಬೈನಿಂದ ಟ್ರೋಫಿಯನ್ನು ಪಡೆಯಬೇಕು ಎಂದು ಮೊಹ್ಸಿನ್ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಬಿಸಿಸಿಐ, ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸುವುದಿಲ್ಲ ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಆದ್ದರಿಂದ, ಐಸಿಸಿ ಸಭೆಯಲ್ಲಿ ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ
ಜಯ್ ಶಾ ಮುಂದೆ ಟ್ರೋಫಿ ವಿವಾದ
ಈಗ ಏಷ್ಯಾಕಪ್ ಟ್ರೋಫಿ ವಿವಾದವನ್ನು ಐಸಿಸಿ ಮುಂದೆ ಎತ್ತಿದರೆ, ಪಿಸಿಬಿ ಮತ್ತು ಎಸಿಸಿ ಮುಖ್ಯಸ್ಥ ನಖ್ವಿ ತೀವ್ರ ಮುಜುಗರವನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಐಸಿಸಿ ಮುಖ್ಯಸ್ಥರಾಗಿರುವ ಜಯ್ ಶಾ, ಈ ಹಿಂದೆ ಬಿಸಿಸಿಐ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಹೀಗಾಗಿ ನಖ್ವಿ ಎದುರು, ಬಿಸಿಸಿಐ ಮೇಲುಗೈ ಸಾಧಿಸುವ ಸಾಧ್ಯತೆಗಳಿವೆ ಎನ್ನಬಹುದು.