ಏಷ್ಯಾಕಪ್ ನಿಯಮ ಉಲ್ಲಂಘನೆ: ಸೂರ್ಯಕುಮಾರ್ ಯಾದವ್‌ಗೆ ಶೇ. 30ರಷ್ಟು ದಂಡ; ಹ್ಯಾರಿಸ್ ರೌಫ್‌ಗೆ 2 ಪಂದ್ಯಗಳ ನಿಷೇಧ!

ದುಬೈ: ಏಷ್ಯಾಕಪ್ ಕ್ರಿಕೆಟ್ (Asia Cup) ಟೂರ್ನಿ ವೇಳೆ ನಿಯಮ ಉಲ್ಲಂಘನೆ ಎಸಗಿದ್ದಕ್ಕೆ ಟೀಂ ಇಂಡಿಯಾ (Team India) ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತು ಪಾಕಿಸ್ತಾದ ಬೌಲರ್ ಹ್ಯಾರಿಸ್ ರೌಫ್ (Haris Rauf) ವಿರುದ್ಧ ಶಿಸ್ತು ಕ್ರಮ ಕೈಗೊಂಡಿರುವನ್ನು ಐಸಿಸಿ ಅಧಿಕೃತವಾಗಿ ತಿಳಿಸಿದೆ.

ಸೂರ್ಯಕುಮಾರ್ ಯಾದವ್‌ಗೆ ಪಂದ್ಯದ ಶುಲ್ಕದ ಶೇ.30 ರಷ್ಟು ದಂಡ ವಿಧಿಸಲಾಗಿದೆ. ಹ್ಯಾರಿಸ್ ರೌಫ್ ಅವರಿಗೆ ಪಂದ್ಯದ ಸಂಭಾವನೆಯ ಶೇ.30 ರಷ್ಟು ದಂಡದ ಜೊತೆ ಎರಡು ಪಂದ್ಯಗಳಿಂದ ಅಮಾನತು ಮಾಡಲಾಗಿದೆ. ಬ್ಯಾಟರ್ ಸಾಹಿಬ್‌ಝಾದಾ ಫರ್ಹಾನ್ (Sahibzada Farhan) ಅವರಿಗೆ ಐಸಿಸಿ (ICC) 2 ಡಿಮೆರಿಟ್ ಪಾಯಿಂಟ್ ಜೊತೆಗೆ ಕಠಿಣ ಎಚ್ಚರಿಕೆ ನೀಡಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸೂರ್ಯಕುಮಾರ್ ಯಾದವ್ ವಿರುದ್ದ ಬಿಸಿಸಿಐ ಹ್ಯಾರಿಸ್ ರೌಫ್ ಮತ್ತು ಸಾಹಿಬ್‌ಝಾದಾ ಫರ್ಹಾನ್ ವಿರುದ್ಧ ಐಸಿಸಿಗೆ ದೂರು ನೀಡಿತ್ತು. ದೂರಿನ ಬಳಿಕ ಐಸಿಸಿಯ ಶಿಸ್ತು ಸಮಿತಿ ಆಟಗಾರರನ್ನು ವಿಚಾರಣೆ ನಡೆಸಿತ್ತು.
ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತ-ಪಾಕ್ (India vs Pakistan) ಮುಖಾಮುಖಿಯಾಗಿದ್ದ ಮೊದಲ ಟೂರ್ನಿ ವಿವಾದದ ಕಣವಾಗಿ ಮಾರ್ಪಟ್ಟಿತ್ತು. ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನೀಡಿದ ದೂರನ್ನು ಸ್ವೀಕರಿಸಿದ ಐಸಿಸಿ (ICC) ಸೂರ್ಯಕುಮಾರ್ ಯಾದವ್ ಅವರ ವಿಚಾರಣೆ ನಡೆಸಿತ್ತು. ಪಿಸಿಬಿ ಸಲ್ಲಿಸಿದ ಎಲ್ಲಾ ಪುರಾವೆಗಳು ಮತ್ತು ಹೇಳಿಕೆಗಳನ್ನು ಪರಿಶೀಲಿಸಿದ ನಂತರ ಸೂರ್ಯಕುಮಾರ್ ಅವರ ಹೇಳಿಕೆಗಳು ಕ್ರೀಡಾ ಸ್ಪೂರ್ತಿಗೆ ವಿರುದ್ಧವಾಗಿದೆ. ಹೀಗಾಗಿ ಸೂರ್ಯಕುಮಾರ್ ವಿರುದ್ಧ ಆರೋಪ ಹೊರಿಸುವಂತೆ ಮ್ಯಾಚ್ ರೆಫ್ರೀ ರಿಚಿ ರಿಚರ್ಡ್ಸನ್ ತೀರ್ಮಾನಿಸಿದ್ದರು.
ಸೂರ್ಯಗೆ ಯಾಕೆ ದಂಡ?
ಸೆಪ್ಟೆಂಬರ್ 14 ರಂದು ಪಾಕಿಸ್ತಾನದ ವಿರುದ್ಧದ ಲೀಗ್ ಪಂದ್ಯದಲ್ಲಿ ಭಾರತ ಜಯಗಳಿಸಿದ ನಂತರ ಮಾತನಾಡಿದ ಸೂರ್ಯ, ಪಹಲ್ಗಾಮ್ ಸಂತ್ರಸ್ತರ ಕುಟುಂಬಗಳೊಂದಿಗೆ ನಾವು ನಿಲ್ಲುತ್ತೇವೆ, ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುತ್ತೇವೆ. ಶೌರ್ಯವನ್ನು ಪ್ರದರ್ಶಿಸಿದ ನಮ್ಮ ಎಲ್ಲಾ ಸಶಸ್ತ್ರ ಪಡೆಗಳಿಗೆ ಈ ಗೆಲುವನ್ನು ಅರ್ಪಿಸಲು ಬಯಸುತ್ತೇವೆ. ಅವರು ನಮಗೆಲ್ಲರಿಗೂ ಸ್ಫೂರ್ತಿ ಎಂದು ಹೇಳಿದ್ದರು.
ಪಾಕ್ ಆಟಗಾರರು ಮಾಡಿದ್ದೇನು?
ಸೂಪರ್-4 ಪಂದ್ಯದ ವೇಳೆ ಸಾಹಿಬ್‌ಝಾದಾ ಫರ್ಹಾನ್ ಫಿಫ್ಟಿ ಬಾರಿಸಿದ ಬಳಿಕ ಗನ್ ಸೆಲಬ್ರೇಷನ್ ಮಾಡಿದ್ದರು. ರೈಫಲ್ ರೀತಿ ಶೋ ಮಾಡಿ ಮೂರು ಸುತ್ತು ಗುಂಡು ಹಾರಿಸಿದ ರೀತಿ ಆಕ್ಷನ್ ಮಾಡಿದ್ದರು.
ಫೀಲ್ಡಿಂಗ್ ವೇಳೆ ಹ್ಯಾರಿಸ್ ರೌಫ್ ಅವರನ್ನು ಕೊಹ್ಲಿ ಅಭಿಮಾನಿಗಳು ಛೇಡಿಸಿದ್ದರು. 2022ರ ಟಿ20 ವಿಶ್ವಕಪ್ ಪಂದ್ಯದಲ್ಲಿ ಹ್ಯಾರಿಸ್ ರೌಫ್‌ಗೆ ಬಾರಿಸಿದ್ದ ಸಿಕ್ಸ್ ಅನ್ನು ಉಲ್ಲೇಖಿಸುತ್ತಾ ಕೊಹ್ಲಿ ಕೂಹ್ಲಿ ಎಂದು ಕೂಗುತ್ತಿದ್ದರು. ಈ ವೇಳೆ ರೌಫ್ ವಿಮಾನ ಕ್ರ್ಯಾಶ್ ರೀತಿ ಸನ್ನೆ ಮಾಡಿ ಅಣುಕಿಸಿದ್ದರು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು.