ಏಷ್ಯಾಕಪ್ ಅತ್ಯುತ್ತಮ ಆಟಗಾರ ಅಭಿಷೇಕ್ ಶರ್ಮಾಗೆ ‘ಕಾನೂನು’ ಕಂಟಕ: ಗೆದ್ದ ₹25 ಲಕ್ಷದ ಐಷಾರಾಮಿ SUV ಭಾರತಕ್ಕೆ ತರಲು ಬಿಕ್ಕಟ್ಟು!

Abhishek Sharma: ಈ ಬಾರಿಯ ಏಷ್ಯಾಕಪ್ನಲ್ಲಿ ಅತ್ಯಧಿಕ ರನ್ಗಳಿಸಿದ್ದು ಟೀಮ್ ಇಂಡಿಯಾದ ಯುವ ಎಡಗೈ ದಾಂಡಿಗ ಅಭಿಷೇಕ್ ಶರ್ಮಾ. 7 ಇನಿಂಗ್ಸ್ಗಳಲ್ಲಿ ಆರಂಭಿಕನಾಗಿ ಬ್ಯಾಟ್ ಬೀಸಿದ್ದ ಅಭಿ 314 ರನ್ ಗಳಿಸುವ ಮೂಲಕ ಮಿಂಚಿದ್ದರು. ಈ ಭರ್ಜರಿ ಪ್ರದರ್ಶನದ ಫಲವಾಗಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದಿದ್ದರು

ಏಷ್ಯಾಕಪ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಅಭಿಷೇಕ್ ಶರ್ಮಾ (Abhishek Sharma) ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದಿದ್ದರು. ಈ ಪ್ರಶಸ್ತಿಯೊಂದಿಗೆ ಟೀಮ್ ಇಂಡಿಯಾ ಆಟಗಾರನಿಗೆ ಸುಮಾರು 25 ಲಕ್ಷ ರೂ. ಮೌಲ್ಯದ ಹವಾಲ್ H9 SUV ಕಾರು ಕೂಡ ನೀಡಲಾಗಿತ್ತು. ಆದರೀಗ ಈ ಐಷಾರಾಮಿ ಕಾರನ್ನು ಭಾರತಕ್ಕೆ ತರಲು ಬಿಕ್ಕಟ್ಟು ಎದುರಾಗಿದೆ.
ಹೌದು, ಅಭಿಷೇಕ್ ಶರ್ಮಾಗೆ ಸಿಕ್ಕ HAVAL H9 SUV ಕಾರನ್ನು ಭಾರತಕ್ಕೆ ತರಲು ಕಾನೂನಿನ ತೊಡಕು ಉಂಟಾಗಿದೆ. ಇದಕ್ಕೆ ಮುಖ್ಯ ಕಾರಣ ಭಾರತೀಯ ರಸ್ತೆ ನಿಯಮ. ಅಂದರೆ ಭಾರತದಲ್ಲಿ ಬಲಗೈ ಡ್ರೈವ್ (RHD) ವಾಹನಗಳನ್ನು ಮಾತ್ರ ಓಡಿಸಲು ಅನುಮತಿಸಲಾಗಿದೆ.
ಅತ್ತ ಅಭಿಷೇಕ್ ಶರ್ಮಾಗೆ ಸಿಕ್ಕಿರುವುದು ಎಡಗೈ ಡ್ರೈವ್ (LHD) ಕಾರ್. ಹವಾಲ್ H9 SUV ಕಾರಿನ ಸ್ಟೇರಿಂಗ್ ಎಡ ಭಾಗದಲ್ಲಿದೆ. ಹೀಗಾಗಿ ಈ ಕಾರನ್ನು ಭಾರತದಲ್ಲಿ ನೋಂದಾಯಿಸಲು ಹಾಗೂ ಓಡಿಸಲು ಅವಕಾಶವಿಲ್ಲ. ಇದೇ ಕಾರಣದಿಂದಾಗಿ ಅಭಿಷೇಕ್ ಶರ್ಮಾ ಇನ್ನೂ ಸಹ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಕಾರನ್ನು ಭಾರತಕ್ಕೆ ತಂದಿಲ್ಲ ಎಂದು ತಿಳಿದು ಬಂದಿದೆ.
ಇದಾಗ್ಯೂ GWM ಕಂಪೆನಿಯು ನವೆಂಬರ್ 2025 ರ ವೇಳೆಗೆ ಭಾರತದಲ್ಲಿ ಬಲಗೈ ಡ್ರೈವ್ ಆವೃತ್ತಿಯಲ್ಲಿ HAVAL SUV ಅನ್ನು ಬಿಡುಗಡೆ ಮಾಡಲಿದ್ದಾರೆ ಎಂದು ವರದಿಯಾಗಿದೆ. ಈ ವೇಳೆ ಅಭಿಷೇಕ್ ಶರ್ಮಾ ಅವರಿಗೆ ಭಾರತದಲ್ಲಿ ಬಳಸಬಹುದಾದ ಹೊಸ ಮಾದರಿಯ ಬಲಗೈ ಡ್ರೈವ್ (RHD) ಹವಾಲ್ H9 SUV ಕಾರ್ ನೀಡುವ ಸಾಧ್ಯತೆಯಿದೆ.
ಹೀಗಾಗಿ ಏಷ್ಯಾಕಪ್ನಲ್ಲಿ ಗೆದ್ದಂತಹ ಕಾರನ್ನು ಪಡೆಯಲು ಅಭಿಷೇಕ್ ಶರ್ಮಾ ಇನ್ನೊಂದಷ್ಟು ದಿನಗಳವರೆಗೆ ಕಾಯಲೇಬೇಕು. ಸದ್ಯ ವಿಶ್ರಾಂತಿಯಲ್ಲಿರುವ ಯುವ ಎಡಗೈ ದಾಂಡಿಗ ಅಕ್ಟೋಬರ್ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ವೇಳೆ ಮತ್ತೆ ಟೀಮ್ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ. ಇದು ಅಭಿಷೇಕ್ ಶರ್ಮಾ ಅವರ ಮೊದಲ ಆಸೀಸ್ ಪ್ರವಾಸವಾಗಿದ್ದು, ಈ ಸರಣಿಯಲ್ಲಿ ಅವರ ಪ್ರದರ್ಶನ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.