ಅರುಣಾಚಲ ಪ್ರದೇಶ: ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ ಎಸಗಿದ ಆರೋಪಿಗೆ ಗುಂಪಿನಿಂದ ಥಳಿತ, ಸಾವು!

ಗುವಾಹಟಿ: ಅರುಣಾಚಲ ಪ್ರದೇಶದಲ್ಲಿ ಗುಂಪೊಂದು ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ ಎಸಗಿದ ಆರೋಪಿಯನ್ನು ಪೊಲೀಸ್ ಠಾಣೆಯಿಂದ ಹೊರಗೆ ಎಳೆದು ತಂದು ನಂತರ ಹೊಡೆದು ಕೊಂದಿದ್ದಾರೆ. ಈ ಘಟನೆ ಲೋವರ್ ದಿಬಾಂಗ್ ಕಣಿವೆ ಜಿಲ್ಲೆಯ ರೋಯಿಂಗ್‌ನಲ್ಲಿ ನಡೆದಿದೆ. ಮೃತನನ್ನು ಕಟ್ಟಡ ಕಾರ್ಮಿಕ ಎಂದು ಹೇಳಲಾಗುತ್ತಿದೆ.

ರೋಯಿಂಗ್‌ನ ಮೌಂಟ್ ಕಾರ್ಮೆಲ್ ಶಾಲೆಯ 5 ರಿಂದ 7 ವರ್ಷ ವಯಸ್ಸಿನ ಕನಿಷ್ಠ ಏಳು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿದ್ದಾನೆ.
ಬಾಲಕಿಯರು ಶಾಲೆಯ ಹಾಸ್ಟೆಲ್‌ನಲ್ಲಿ ತಂಗಿದ್ದರು. ಹೀಗಾಗಿ ಆರೋಪಿ ಮಧ್ಯರಾತ್ರಿಯಲಿ ಹಾಸ್ಟೆಲ್ ಗೆ ನುಗ್ಗಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಇನ್ನು ಬಾಲಕಿಯರು ಹೊಟ್ಟೆನೋವು ಎಂದು ಆರೋಪಿಸಿದ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿ ಪರೀಕ್ಷಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕಳೆದ ಗುರುವಾರ ಆರೋಪಿಯನ್ನು ಪೊಲೀಸರು ಬಂಧಿಸಿ ಪೊಲೀಸ್ ಠಾಣೆಯಲ್ಲಿ ಇರಿಸಿದ್ದರು. ಶುಕ್ರವಾರ ಪೋಷಕರು ಮತ್ತು ಸ್ಥಳೀಯರು ಪೊಲೀಸ್ ಠಾಣೆಗೆ ನುಗ್ಗಿ, ಆರೋಪಿಯನ್ನು ಹೊರಗೆ ಎಳೆದು ತೀವ್ರವಾಗಿ ಥಳಿಸಿದ್ದಾರೆ. ಪೊಲೀಸರು ಆರೋಪಿಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಆದರೆ ಬೆಂಬಿಡದೆ ಹಿಂಬಾಲಿಸಿದ ಗುಂಪು ಮತ್ತೊಮ್ಮೆ ಆತನಿಗೆ ಥಳಿಸಿತ್ತು. ಇನ್ನು ಗಂಭೀರವಾಗಿ ಗಾಯಗೊಂಡಿದ್ದು ಅಪ್ರಾಪ್ತ ಬಾಲಕ ಮೃತಪಟ್ಟಿದ್ದಾನೆ.
ಬಾಲಕಿಯರ ಹಾಸ್ಟೆಲ್‌ನಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಅಹಿತಕರ ಘಟನೆಯಿಂದಾಗಿ ಜುಲೈ 12ರಿಂದ ಅನಿರ್ದಿಷ್ಟಾವಧಿಯವರೆಗೆ ಶಾಲೆಯನ್ನು ಮುಚ್ಚಲಾಗುವುದು ಎಂದು ಜಿಲ್ಲಾ ಅಧಿಕಾರಿಗಳು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಆದೇಶದಲ್ಲಿ ತಿಳಿಸಿದ್ದಾರೆ.
