ಬೆಂಗಳೂರಿನಲ್ಲಿ ನಡೆಯುತ್ತಿರುವ ಹೊಸ ಸುಲಿಗೆಯ ಬಗ್ಗೆ ಗೊತ್ತೇ?

ಬೆಂಗಳೂರು :ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನ ಹೆಚ್ಚಾಗಿ ಬಾಡಿಗೆ ಮನೆಗಳನ್ನೇ ಆಶ್ರಯಿಸುತ್ತಿದ್ದಾರೆ. ಇದನ್ನು ಮನಗಂಡ ಮನೆ ಮಾಲೀಕರು ಬಾಡಿಗೆದಾರರಿಗೆ ಹೊಸ ಆಘಾತ ನೀಡುತ್ತಿದ್ದಾರೆ ಎಂಬ ವಿಚಾರ ತಿಳಿದುಬಂದಿದೆ. ಮೊದಲೇ ಬಾಡಿಗೆ ಮನೆಗಳು ಎಂದರೆ ಮಾಲೀಕರಿಂದ ಕಿರಿಕಿರಿ ಇರುತ್ತೆ ಎನ್ನುವ ದೂರು ಮೊದಲಿನಿಂದಲೂ ಇದೆ.

ಇದೀಗ ಬಾಡಿಗೆ ಪಾವತಿದಾರರನ್ನು ಸುಲಿಗೆ ಮಾಡಲು ಮಾಲೀಕರು ಹೊಸ ದಾರಿ ಹಿಡಿದಿದ್ದಾರೆ ಎನ್ನಲಾಗಿದೆ. ಬಾಡಿಗೆದಾರರಿಗೆ ಇತ್ತೀಚೆಗೆ ಹೆಚ್ಚಾಗಿರುವ ದೊಡ್ಡ ಸಮಸ್ಯೆ ಏನು ಎಂಬ ವಿಚಾರ ಇಲ್ಲಿ ತಿಳಿಯಿರಿ..
ಸಾಮಾನ್ಯವಾಗಿ ಎಲ್ಲ ಕಡೆಯೂ ಮನೆಯನ್ನು ಬಾಡಿಗೆಗೆ ಪಡೆಯುವಾಗ ಒಂದಿಷ್ಟು ಅಡ್ವಾನ್ಸ್, ಭದ್ರತಾ ಠೇವಣಿ ಪಡೆಯುತ್ತಾರೆ. ಕೆಲ ಮಾಲೀಕರು ತಿಂಗಳ ಬಾಡಿಗೆಯ ಐದು ಪಟ್ಟು, ಹತ್ತು ಪಟ್ಟು ಹಣವನ್ನು ಮುಂಗಡವಾಗಿ ಪಡೆಯುತ್ತಾರೆ. ಬಳಿಕ ಮನೆ ಖಾಲಿ ಮಾಡುವಾಗ ವಾಪಸ್ ಕೊಡುತ್ತಿದ್ದವರು ಇದೀಗ ತಮ್ಮ ವರಸೆ ಬದಲಿಸಿದ್ದಾರೆ ಎಂದು ದೂರುಗಳು ಕೇಳಿಬರುತ್ತಿವೆ. ಈ ಹಣ ವಾಪಸ್ ನೀಡುವ ಸಂದರ್ಭದಲ್ಲಿ ಹೊಸ ಕಾರಣವೊಂದನ್ನು ನೀಡಿ ಸುಲಿಗೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿನಲ್ಲಿ ಮನೆ ಮಾಲೀಕರು ಆಸ್ತಿಯನ್ನು ಖಾಲಿ ಮಾಡುವಾಗ ಪೇಂಟಿಂಗ್ (ಬಣ್ಣ ಬಳಿಯಲು) ಶುಲ್ಕವಾಗಿ ಭದ್ರತಾ ಠೇವಣಿಯಿಂದ ಒಂದು ತಿಂಗಳ ಬಾಡಿಗೆಗೆ ಸಮಾನವಾದ ಹಣವನ್ನು ಕಡಿತಗೊಳಿಸುತ್ತಿದ್ದಾರೆ ಎಂದು ಬಾಡಿಗೆದಾರರು ಅಳಲು ತೋಡಿಕೊಂಡಿದ್ದಾರೆ. ನಗರದ ಬಾಡಿಗೆ ವಸತಿ ಕ್ಷೇತ್ರದಲ್ಲಿ ಮೊದಲಿನಿಂದಲೂ ರೂಢಿಯಲ್ಲಿರುವ ಈ ಪದ್ಧತಿಗೆ ಇದೀಗ ಭಾರಿ ವಿರೋಧವೂ ವ್ಯಕ್ತವಾಗಿದೆ.
ನಗರದಲ್ಲಿನ ಹೆಚ್ಚಿನ ಬಾಡಿಗೆ ಒಪ್ಪಂದಗಳಲ್ಲಿ ಮನೆ ಖಾಲಿ ಮಾಡುವ ಸಮಯದಲ್ಲಿ ಆವರಣವನ್ನು ಪುನಃ ಪೇಂಟಿಂಗ್ ಮಾಡಲು ಅಥವಾ ಸ್ಥಿರ ಠೇವಣಿ ಕಡಿತಕ್ಕೆ ಒಳಗಾಗಲು ಬಾಡಿಗೆದಾರರು ಜವಾಬ್ದಾರರಾಗಿರುತ್ತಾರೆ ಎಂಬ ಷರತ್ತನ್ನು ವಿಧಿಸಲಾಗುತ್ತಿದೆ. ಇದನ್ನು ಕೆಲವರು ಮೊದಲೇ ಬಾಡಿಗೆದಾರರಿಗೆ ವಿವರಿಸುತ್ತಾರೆ. ಬಾಡಿಗೆದಾರರು ಮನೆ ಖಾಲಿ ಮಾಡಿದ ನಂತರ ಪೇಂಟಿಂಗ್ ಶುಲ್ಕಕ್ಕಾಗಿ ಒಂದು ತಿಂಗಳ ಬಾಡಿಗೆ ಹಣವನ್ನು ಉಳಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಬಾಡಿಗೆದಾರರು ಮನೆ ಖಾಲಿ ಮಾಡುವ ಸಮಯದಲ್ಲಿ ಪೇಂಟಿಂಗ್ ಶುಲ್ಕಕ್ಕಾಗಿ ಒಂದು ತಿಂಗಳ ಬಾಡಿಗೆಯನ್ನು ಪಾವತಿಸಲೇಬೇಕು. ಇಲ್ಲದಿದ್ರೆ ಆ ಹಣವನ್ನು ಭದ್ರತಾ ಠೇವಣಿಯಿಂದ ಕಡಿತಗೊಳಿಸಲಾಗುತ್ತದೆ ಎಂದು ಬಹುತೇಕ ಅಪಾರ್ಟ್‌ಮೆಂಟ್‌ನ ಬಾಡಿಗೆ ಒಪ್ಪಂದಗಳಲ್ಲಿ ಉಲ್ಲೇಖಿಸಲಾಗುತ್ತಿದೆ. ಆದರೆ ಇದನ್ನು ಸುಲಿಗೆ ಎಂದು ಬಾಡಿಗೆದಾರರು ಕರೆದಿದ್ದಾರೆ.
