‘ಅಪಾಯಕಾರಿ’ ಮರಗಳ ನೆಪದಲ್ಲಿ ಕಡಲತೀರದ ಬೆಲೆಬಾಳುವ ಗಾಳಿ ಮರಗಳ ಕಳ್ಳ ಸಾಗಣೆ?

ಉಳ್ಳಾಲ: ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ಅಪಾಯ ದಲ್ಲಿರುವ ಮರಗಳ ರೆಂಬೆಯನ್ನು ತೆಗೆಯಲು ಸೋಮೇಶ್ವರ ಪುರಸಭೆ ಅರಣ್ಯ ಇಲಾಖೆಗೆ ಪಟ್ಟಿ ನೀಡಿದರೆ, ಅವುಗಳ ಬದಲಿಗೆ ಸೋಮೇಶ್ವರ ಕಡಲ ತೀರ ಬದಿಯಲ್ಲಿದ್ದ ಬೆಲೆ ಬಾಳುವ ಗಾಳಿ ಮರಗಳನ್ನು ಕಡಿದು ಸಾಗಿಸಿದ್ದರ ಬಗ್ಗೆ ಸ್ಥಳೀಯವಾಗಿ ಆಕ್ರೋಶ ವ್ಯಕ್ತವಾಗಿದೆ.

ಕಡಲ ತೀರದಲ್ಲಿ ಅಪಾಯದಲ್ಲಿದ್ದ ಎರಡು ಗಾಳಿ ಮರ ಸೇರಿದಂತೆ ಉಚ್ಚಿಲ ಭಗವತಿ ಶಾಲೆ, ಪುರಸಭೆ ಬಳಿ ಇರುವ ಬಸ್ ನಿಲ್ದಾಣದಲ್ಲಿ ಅಪಾಯಕಾರಿಯಾದ ಮರಗಳ ಪಟ್ಟಿ ಮಾಡಿ ರೆಂಬೆ ತೆಗೆಯಲು ಅರಣ್ಯ ಇಲಾಖೆಗೆ ಸೂಚಿಸಿತ್ತು. ಆದರೆ ವಿದ್ಯಾರ್ಥಿಗಳೇ ಹೆಚ್ಚು ನಿಲ್ಲುವ ಸೋಮೇಶ್ವರ ಬಸ್ ನಿಲ್ದಾಣದ ಬಳಿಯ ಅಪಾಯಕಾರಿ ಮರ ಮತ್ತು ಉಚ್ಚಿಲ ಸಂಕೊಳಿಗೆ ಭಗವತಿ ದೇವಸ್ಥಾನ ಬಳಿಯ ಮರಗಳ ರೆಂಬೆ ತೆಗೆಯಬೇಕಿತ್ತು. ಅದರ ಬದಲಾಗಿ ಕಡಲ ತೀರದ ಐದು ಗಾಳಿ ಮರಗಳನ್ನು ಬುಡ ಸಮೇತ ಕಡಿದು, ಸಾಗಿಸಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.

ಈ ಕುರಿತು ಪುರಸಭಾ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಅಪಾಯದಲ್ಲಿರುವ ಮರಗಳ ಪಟ್ಟಿಯನ್ನು ಅರಣ್ಯ ಇಲಾಖೆಗೆ ನೀಡಿದ್ದೆವು. ಆದರೆ ಅವುಗಳನ್ನು ಇದುವರೆಗೂ ತೆರವುಗೊಳಿಸಿಲ್ಲ. ಆದರೆ ಕಡಲ ತೀರದ ಗಾಳಿಮರಗಳನ್ನು ಕಡಿದು ಸಾಗಿಸಲಾಗಿದೆ.
ಈ ಸಂಬಂಧ ಪುರಸಭೆಗೂ ಮಾಹಿತಿ ನೀಡಿಲ್ಲ ಹಾಗಾಗಿ ಅರಣ್ಯ ಇಲಾಖೆಗೆ ಸ್ಪಷ್ಟನೆ ಕೋರಲಾಗುವುದು ಎಂದು ತಿಳಿಸಿದ್ದಾರೆ.