ವಿಚ್ಛೇದನದ ಸಮಯದಲ್ಲಿ ಸಂಗಾತಿಯ ಕಾಲ್ ರೆಕಾರ್ಡ್ ಸಾಕ್ಷ್ಯವಾಗಿ ಮಾನ್ಯವಾಗತ್ತಾ?

ನವದೆಹಲಿ: ತನ್ನ ಸಂಗಾತಿ ತನ್ನೊಂದಿಗೆ ಮೊಬೈಲಿನಲ್ಲಿ ಮಾತನಾಡಿದ್ದನ್ನು ರಹಸ್ಯವಾಗಿ ರೆಕಾರ್ಡ್ ಮಾಡಿದ ಕಾಲ್ ರೆಕಾರ್ಡರ್ ಅನ್ನು ವಿಚ್ಛೇದನದ ವೇಳೆ ಸಾಕ್ಷಿಯಾಗಿ ಪರಿಗಣಿಸಲು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಪತಿಯ ಮನವಿಯನ್ನು ಸುಪ್ರೀಂ ಕೋರ್ಟ್ (Supreme Court) ಗಂಭೀರವಾಗಿ ಪರಿಗಣಿಸಿದೆ. ಗಂಡ-ಹೆಂಡತಿ ನಡುವಿನ ದೂರವಾಣಿ ಸಂಭಾಷಣೆಯು ವೈವಾಹಿಕ ವಿವಾದ ಪ್ರಕರಣದಲ್ಲಿ ಸ್ವೀಕಾರಾರ್ಹ ಸಾಕ್ಷಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಿದೆ. ಸಂಗಾತಿಯ ಫೋನ್ ಸಂಭಾಷಣೆಯನ್ನು ರಹಸ್ಯವಾಗಿ ರೆಕಾರ್ಡ್ ಮಾಡುವುದು ಗೌಪ್ಯತೆಯ ಉಲ್ಲಂಘನೆಯಾಗಿದೆ, ಇದನ್ನು ಕೌಟುಂಬಿಕ ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಸ್ವೀಕರಿಸಲಾಗುವುದಿಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಈ ಬಗ್ಗೆ ತಮ್ಮ ತೀರ್ಪಿನಲ್ಲಿ ಹೇಳಿದ್ದು, “ಈ ರೀತಿಯ ಕಾಲ್ ರೆಕಾರ್ಡರ್ಗಳನ್ನು ಸಾಕ್ಷಿಯಾಗಿ ಪರಿಗಣಿಸುವುದರಿಂದ ದೇಶೀಯ ಸಾಮರಸ್ಯ ಮತ್ತು ವೈವಾಹಿಕ ಸಂಬಂಧಗಳಿಗೆ ಧಕ್ಕೆ ಉಂಟಾಗುತ್ತದೆ. ಇದು ತಮ್ಮ ಸಂಗಾತಿಗಳ ಮೇಲೆ ಕಣ್ಣಿಡುವಂತಹ ಪ್ರವೃತ್ತಿಯನ್ನು ಹೆಚ್ಚಿಸುತ್ತದೆ ಎಂಬ ವಾದ ಸಮರ್ಥನೀಯ ಎಂದು ನಾವು ಭಾವಿಸುವುದಿಲ್ಲ. ವಿವಾಹವು ಒಂದುವೇಳೆ ಸಂಗಾತಿಗಳು ಪರಸ್ಪರ ಒಬ್ಬರ ಮೇಲೊಬ್ಬರು ಕಣ್ಣಿಡುವ ಹಂತವನ್ನು ತಲುಪಿದ್ದರೆ ಅಂತಹ ಸಂಬಂಧ ಮುಂದುವರೆಯುವುದರಲ್ಲಿ ಯಾವ ಅರ್ಥವೂ ಇಲ್ಲ. ಅದು ಮುರಿದ ಸಂಬಂಧದ ಲಕ್ಷಣವಾಗಿದೆ. ಅದು ಅವರ ನಡುವಿನ ನಂಬಿಕೆಯ ಕೊರತೆಯನ್ನು ಸೂಚಿಸುತ್ತದೆ” ಎಂದು ಹೇಳಿದ್ದಾರೆ.
ಈ ಹಿಂದೆ ಭಟಿಂಡಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಿದ್ದ ಈ ವಿಷಯವು ಹಿಂದೂ ವಿವಾಹ ಕಾಯ್ದೆ, 1955ರ ಸೆಕ್ಷನ್ 13ರ ಅಡಿಯಲ್ಲಿ ವಿಚ್ಛೇದನ ಪ್ರಕ್ರಿಯೆಗಳನ್ನು ಒಳಗೊಂಡಿತ್ತು. ಪತಿ ತನ್ನ ಪತ್ನಿಯ ಮೇಲೆ ಕ್ರೌರ್ಯದ ಆರೋಪ ಹೊರಿಸಿದ್ದರು. ಅವರು ತನ್ನ ಆರೋಪವನ್ನು ಸಾಬೀತುಪಡಿಸಲು ರೆಕಾರ್ಡ್ ಮಾಡಿದ ಫೋನ್ ಸಂಭಾಷಣೆಗಳನ್ನು ಉಲ್ಲೇಖಿಸಿದ್ದರು. ಆದರೆ, ಕೌಟುಂಬಿಕ ನ್ಯಾಯಾಲಯವು ಈ ರೆಕಾರ್ಡಿಂಗ್‌ಗಳಿರುವ ಸಿಡಿಯನ್ನು ಸಾಕ್ಷಿಯಾಗಿ ಪರಿಗಣಿಸಲು ಅನುಮತಿಸಿತ್ತು. ತನ್ನ ಗಂಡ ರಹಸ್ಯವಾಗಿ ಕಾಲ್ ರೆಕಾರ್ಡ್ ಮಾಡಿದ್ದಾನೆ. ಅದನ್ನು ಪರಿಗಣಿಸಬಾರದು ಎಂದು ಪತ್ನಿ ಹೈಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸಿದ್ದರು. ನನ್ನ ಒಪ್ಪಿಗೆಯಿಲ್ಲದೆ ಕಾಲ್ ರೆಕಾರ್ಡ್ ಮಾಡಲಾಗಿದೆ. ಅವುಗಳನ್ನು ಸಾಕ್ಷಿಯಾಗಿ ಸ್ವೀಕರಿಸುವುದು ನನ್ನ ಗೌಪ್ಯತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅವರು ವಾದಿಸಿದ್ದರು.
ಆಕೆಯ ವಾದವನ್ನು ಒಪ್ಪಿದ್ದ ಹೈಕೋರ್ಟ್ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತ್ತು. ಈ ತೀರ್ಪನ್ನು ಪತಿ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಇದೀಗ ಆ ಪತಿಯ ಅವರ ಪರವಾಗಿ ತೀರ್ಪು ಹೊರಬಿದ್ದಿದೆ. ವಿಚ್ಛೇದನ ಪ್ರಕ್ರಿಯೆಯಲ್ಲಿ ಪತಿ ತನ್ನ ಪತ್ನಿಯ ರಹಸ್ಯವಾಗಿ ರೆಕಾರ್ಡ್ ಮಾಡಿದ ಫೋನ್ ಕರೆಗಳನ್ನು ಸಾಕ್ಷಿಯಾಗಿ ಬಳಸುವುದನ್ನು ನಿಷೇಧಿಸಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಪತ್ನಿಯ ದೂರವಾಣಿ ಸಂಭಾಷಣೆಗಳನ್ನು ಅವಳಿಗೆ ತಿಳಿಯದೆ ರೆಕಾರ್ಡ್ ಮಾಡುವುದು ಆಕೆಯ ಗೌಪ್ಯತೆಯ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆ ಎಂದು ಹೈಕೋರ್ಟ್ ಈ ಹಿಂದೆ ಹೇಳಿತ್ತು. ಆದರೆ, “ವಿವಾಹವು ಸಂಗಾತಿಗಳು ಪರಸ್ಪರ ಹದ್ದಿನ ಕಣ್ಣಿಡುವ ಹಂತವನ್ನು ತಲುಪಿದ್ದರೆ ಅದು ಮುರಿದ ಸಂಬಂಧದ ಲಕ್ಷಣವಾಗಿದೆ. ಅದು ಅವರ ನಡುವಿನ ನಂಬಿಕೆಯ ಕೊರತೆಯನ್ನು ಸೂಚಿಸುತ್ತದೆ” ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠ ತೀರ್ಪು ನೀಡಿದೆ.