500 ರೂ. ನೋಟುಗಳು ಬ್ಯಾನ್ ಆಗತ್ತಾ? PIB ಸ್ಪಷ್ಟನೆ

ಆಂಧ್ರಪ್ರದೇಶ :ಭ್ರಷ್ಟಾಚಾರವನ್ನು ಹತ್ತಿಕ್ಕುವ ಪ್ರಯತ್ನದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಕೇಂದ್ರ ಸರ್ಕಾರವನ್ನು 500 ರೂ. ನೋಟುಗಳನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು. ಈ ಬೆನ್ನಲ್ಲೇ ಚಾರ್ಟರ್ಡ್ ಅಕೌಂಟೆಂಟ್ (CA) ಈಗ ಎಕ್ಸ್ ಮೂಲಕ ಆರ್‌ಬಿಐ ಸೆಪ್ಟೆಂಬರ್ 30 ರೊಳಗೆ ಎಟಿಎಂಗಳಿಂದ 500 ರೂ.ನೋಟುಗಳನ್ನು ವಿತರಿಸುವುದನ್ನು ನಿಲ್ಲಿಸುವಂತೆ ಎಲ್ಲಾ ಬ್ಯಾಂಕುಗಳಿಗೆ ಸೂಚಿಸಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಈ ಬಗ್ಗೆ PIB Fact Check ಅಧಿಕೃತ ಹೇಳಿಕೆ ನೀಡಿದೆ. ಎಲ್ಲಾ ಬ್ಯಾಂಕ್ ಎಟಿಎಂಗಳಿಂದ 500 ರೂ. ನೋಟುಗಳ ಚಲಾವಣೆಯನ್ನು ಆರಂಭದಲ್ಲಿ 75% ರಷ್ಟು ಮತ್ತು ನಂತರ ಮಾರ್ಚ್ 31, 2026 ರ ವೇಳೆಗೆ 90% ರಷ್ಟು ಕಡಿಮೆ ಮಾಡುವುದು ಗುರಿಯಾಗಿದೆ. ಅಲ್ಲದೆ, ಎಟಿಎಂಗಳು 200 ಮತ್ತು 100 ರೂ. ನೋಟುಗಳನ್ನು ಮಾತ್ರ ವಿತರಿಸುತ್ತವೆ. ಈ ಹಿನ್ನೆಲೆ 100, 200 ರೂ. ಮೌಲ್ಯದ ಹೆಚ್ಚು ನೋಟುಗಳನ್ನು ಎಟಿಎಂಗೆ ತುಂಬಲು ಸೂಚನೆ ನೀಡಿದೆ ಎಂದೂ ಚಾರ್ಟರ್ಡ್ ಅಕೌಂಟೆಂಟ್ ಹೇಳಿದ್ದು, ಅವರ ಟ್ವೀಟ್ ವೈರಲ್ ಆಗ್ತಿದೆ.
2 ಸಾವಿರ ನೋಟು ಹಿಂತೆಗೆತ ಆಯ್ತು.. ಮುಂದಿನ ಸರದಿ 500 ರೂ.. ನೋಟು..?
ಕೇಂದ್ರ ಸರ್ಕಾರದ ಸೂಚನೆ ಮೇರೆಗೆ RBI 2,000 ರೂ. ನೋಟುಗಳನ್ನು ಹಿಂತೆಗೆದುಕೊಂಡ ನಂತರ, ಪ್ರಸ್ತುತ ಚಲಾವಣೆಯಲ್ಲಿರುವ ಅತ್ಯಧಿಕ ಮೌಲ್ಯದ ಕರೆನ್ಸಿ 500 ರೂ. ನೋಟು ಎಂಬುದನ್ನು ಗಮನಿಸುವುದು ಮುಖ್ಯ. ಆದರೂ, 2000 ರೂ. ನೋಟುಗಳು ಕಾನೂನುಬದ್ಧವಾಗಿ ಚಲಾವಣೆಯಲ್ಲಿವೆ. ಅಂದರೆ, ನಿಮ್ಮ ಬಳಿ ಈಗಲೂ 2 ಸಾವಿರ ನೋಟು ಇದ್ದರೆ RBI ಗೆ ವಾಪಸ್ ಕೊಡಬಹುದು. ಈಗಲೂ ಸಾವಿರಾರು ಕೋಟಿ ರೂ. ಮೌಲ್ಯದ 2 ಸಾವಿರ ರೂ. ನೋಟುಗಳು ದೇಶದ ಜನತೆಯ ಬಳಿ ಇದೆ. 2000 ರೂ. ನೋಟುಗಳ ಒಟ್ಟು ಮೌಲ್ಯವು ಮೇ 31, 2025 ರ ವ್ಯವಹಾರ ಮುಕ್ತಾಯದ ಸಮಯದಲ್ಲಿ 6,181 ಕೋಟಿ ರೂ.ಗಳಿಗೆ ಇಳಿದಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇತ್ತೀಚೆಗೆ ಹೇಳಿತ್ತು. ಅಂದರೆ, 98.26% ರಷ್ಟು ನೋಟುಗಳನ್ನ ಹಿಂತಿರುಗಿಸಲಾಗಿದೆ.
500 ರೂ. ನೋಟು ನಿಜಕ್ಕೂ ಬ್ಯಾನ್ ಆಗ್ತಿದ್ಯಾ..?
ಸಾಮಾನ್ಯವಾಗಿ ಬಳಸುವ ಬ್ಯಾಂಕ್ ನೋಟ್‌ಗಳಿಗೆ ಸಾರ್ವಜನಿಕ ಪ್ರವೇಶವನ್ನು ಸುಧಾರಿಸುವ ಪ್ರಯತ್ನಗಳ ಭಾಗವಾಗಿ, ಎಲ್ಲಾ ಬ್ಯಾಂಕುಗಳು ಮತ್ತು ವೈಟ್ ಲೇಬಲ್ ಎಟಿಎಂ ನಿರ್ವಾಹಕರು (WLAOಗಳು) ತಮ್ಮ ಎಟಿಎಂಗಳು ನಿಯಮಿತವಾಗಿ 100 ಮತ್ತು 200 ರೂ. ಮುಖಬೆಲೆಯ ನೋಟುಗಳನ್ನು ವಿತರಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಸೆಪ್ಟೆಂಬರ್ 30, 2025 ರ ಹೊತ್ತಿಗೆ, ಎಲ್ಲಾ ಎಟಿಎಂಗಳಲ್ಲಿ 75% ರಷ್ಟು ಮಾರುಕಟ್ಟೆಯಲ್ಲಿ ಕನಿಷ್ಠ ಒಂದು ಕ್ಯಾಸೆಟ್‌ನಿಂದ 100 ಅಥವಾ 200 ರೂ. ನೋಟುಗಳನ್ನು ವಿತರಿಸಬೇಕಾಗುತ್ತದೆ. ಅಲ್ಲದೆ, ಮಾರ್ಚ್ 31, 2026 ರ ವೇಳೆಗೆ ಗುರಿ 90% ಕ್ಕೆ ಹೆಚ್ಚಾಗುತ್ತದೆ, ಇದು ಸಾರ್ವಜನಿಕರಿಗೆ ಈ ಮುಖಬೆಲೆಯ ನೋಟುಗಳ ಹೆಚ್ಚಿನ ಲಭ್ಯತೆಯನ್ನು ಖಚಿತಪಡಿಸುತ್ತದೆ ಎಂದೂ ಹೇಳಲಾಗಿದೆ.
PIB Fact Check ಟ್ವೀಟ್
ಆದರೆ, ಈ ವೈರಲ್ ಟ್ವೀಟ್, ವಿಡಿಯೋ ಸುಳ್ಳು ಎಂದು PIB Fact Check ಟ್ವೀಟ್ ಮಾಡಿದೆ. ” 2026 ರ ವೇಳೆಗೆ 500 ರೂ. ನೋಟುಗಳನ್ನು ಹಂತಹಂತವಾಗಿ ರದ್ದುಗೊಳಿಸಲಾಗುತ್ತದೆಯೇ? YT ಚಾನೆಲ್ ‘ಕ್ಯಾಪಿಟಲ್ ಟಿವಿ’ (capitaltvind) ನಲ್ಲಿ #YouTube ವೀಡಿಯೊವೊಂದು ಮಾರ್ಚ್ 2026 ರ ವೇಳೆಗೆ RBI 500 ರೂ. ನೋಟುಗಳ ಚಲಾವಣೆಯನ್ನು ನಿಲ್ಲಿಸುತ್ತದೆ ಎಂದು ತಪ್ಪಾಗಿ ಹೇಳಿಕೊಂಡಿದೆ. RBI ಅಂತಹ ಯಾವುದೇ ಘೋಷಣೆಯನ್ನು ಮಾಡಿಲ್ಲ.500 ರೂ. ನೋಟುಗಳನ್ನು ಸ್ಥಗಿತಗೊಳಿಸಲಾಗಿಲ್ಲ ಮತ್ತು ಕಾನೂನುಬದ್ಧವಾಗಿ ಉಳಿದಿದೆ. ಅಂತಹ ತಪ್ಪು ಮಾಹಿತಿಗೆ ಬಲಿಯಾಗಬೇಡಿ. ಸುದ್ದಿಗಳನ್ನು ನಂಬುವ ಅಥವಾ ಹಂಚಿಕೊಳ್ಳುವ ಮೊದಲು ಯಾವಾಗಲೂ ಅಧಿಕೃತ ಮೂಲಗಳಿಂದ ಪರಿಶೀಲಿಸಿ!” ಎಂದು ಟ್ವೀಟ್ ಮೂಲಕ ಅಧಿಕೃತ ಮಾಹಿತಿ ನೀಡಿದೆ.
ಪರಿಣಾಮ
ಒಂದು ವೇಳೆ 500 ರೂ. ನೋಟುಗಳ ಮುದ್ರಣ ಕಡಿಮೆಯಾದರೂ ಹಾಗೂ ಚಲಾವಣೆಯಲ್ಲಿರುವ 100 ಮತ್ತು 200 ರೂ. ನೋಟುಗಳ ಸಂಖ್ಯೆ ಹೆಚ್ಚಾದರೆ ಮತ್ತು ಈ ಮುಖಬೆಲೆಯ ನೋಟುಗಳನ್ನು ಎಟಿಎಂಗಳಿಂದ ಹೆಚ್ಚಾಗಿ ವಿತರಿಸಿದರೆ, 500 ರೂ. ನೋಟುಗಳ ಸಂಖ್ಯೆ ಖಂಡಿತವಾಗಿಯೂ ಕಡಿಮೆಯಾಗಬಹುದು. ಆದರೆ, 500 ರೂ. ನೋಟುಗಳನ್ನು ಹಿಂಪಡೆಯುವ ಬಗ್ಗೆ ಆರ್‌ಬಿಐನಿಂದ ಯಾವುದೇ ಅಧಿಕೃತ ದೃಢೀಕರಣವಿಲ್ಲ, ಆದ್ದರಿಂದ ಅವು ಮಾರುಕಟ್ಟೆಯಲ್ಲಿ ಕಾನೂನುಬದ್ಧ ಚಲಾವಣೆಯಲ್ಲಿವೆ ಅನ್ನೋದನ್ನ ಜನರು ಗಮನದಲ್ಲಿಟ್ಟುಕೊಳ್ಳಬೇಕು. ಹಾಗೂ, ಈಗಲೇ ನಿಮ್ಮ ಬಳಿ ಇರುವ 500 ರೂ. ನೋಟುಗಳನ್ನು ಬ್ಯಾಂಕಿಗೆ ಕೊಡಲು ಕ್ಯೂ ನಿಲ್ಲುವ ಅವಶ್ಯಕತೆ ಇಲ್ಲ.