ಬೆಂಗಳೂರಿನ ಅಪಾರ್ಟ್‌ಮೆಂಟ್ ಗೋಡೆಯ ಮೇಲೆ ‘ನಾನು ಭಾರತವನ್ನು ಸ್ಫೋಟಿಸುತ್ತೇನೆ’ ಎಂಬ ದೇಶ ವಿರೋಧಿ ಬರಹ ಪತ್ತೆ!

ಬೆಂಗಳೂರು : ರಾಮನಗರ, ಉಡುಪಿ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲೂ ದೇಶ ವಿರೋಧಿ ಬರಹ ಬರೆಯಲಾಗಿದೆ. ನಾನು ಭಾರತವನ್ನೇ ಬ್ಲಾಸ್ಟ್ ಮಾಡುತ್ತೇನೆ (I am going to blast India) ಎಂಬ ಆಘಾತಕಾರಿ ಗೋಡೆ ಬರಹ ಬೆಂಗಳೂರಿನ (Bengaluru) ಅಪಾರ್ಟ್‌ಮೆಂಟ್‌ನಲ್ಲಿ(Apartment) ಪತ್ತೆಯಾಗಿದೆ.

ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿರುವ ಅಪಾರ್ಟ್ಮೆಂಟ್ವೊಂದರ ಗೋಡೆಯ ಮೇಲೆ ‘ನಾನು ಭಾರತವನ್ನು ಸ್ಫೋಟಿಸುತ್ತೇನೆ’ ಎಂದು ಇಂಗ್ಲಿಷ್ನಲ್ಲಿ ಬರೆಯಲಾಗಿದೆ.
ದೇಶ ವಿರೋಧಿ ಬರಹ ಬರೆದಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಕೊಡಿಗೇಹಳ್ಳಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದರು. ದೇಶ ವಿರೋಧಿ ಬರಹ ಬರೆದ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಅಧಿಕಾರಿಗಳು ಅಪಾರ್ಟ್ಮೆಂಟ್ನಲ್ಲಿರೋ ಎಲ್ಲಾ ಸಿಸಿಟಿವಿ ಫೂಟೇಜ್ ಪರಿಶೀಲಿಸುತ್ತಿದ್ದಾರೆ. ಒಂದು ವೇಳೆ ಆರೋಪಿ ಯಾರು ಅನ್ನೋದು ಗೊತ್ತಾದರೆ, ತಕ್ಷಣವೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ. ಆತನ ಹಿನ್ನೆಲೆಯನ್ನೂ ಪರಿಶೀಲಿಸಲಿದ್ದಾರೆ.
ಇತ್ತೀಚಿಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಕಾಲೇಜಿನ ಮಹಿಳಾ ವಸತಿ ನಿಲಯದ ಶೌಚಾಲಯದ ಗೋಡೆಯ ಮೇಲೂ ದೇಶ ವಿರೋಧಿ ಬರಹ ಬರೆಯಲಾಗಿತ್ತು. ಎರಡು ಸಮುದಾಯಗಳ ನಡುವೆ ದ್ವೇಷ ಹರಡುವ ರೀತಿ ‘ಹಿಂದೂಸ್ಥಾನ್ ನಹಿ ಮುಸ್ಲಿಂಸ್ಥಾನ ಬೋಲ್.. ಮುಸ್ಲಿಂ ಜಿಂದಾಬಾದ್ ಹಿಂದೂ ಫ*ಕ್ ಆಫ್’ ಎಂದು ಓರ್ವ ವಿದ್ಯಾರ್ಥಿನಿ ಬರೆದಿದ್ದಳು.
ವಿದ್ಯಾರ್ಥಿನಿ ಬರಹದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಿಟ್ಟೆ ಕಾಲೇಜಿನ ಮಹಿಳಾ ವಸತಿ ನಿಲಯದ ಮ್ಯಾನೇಜರ್ ಕಾರ್ಕಳ ಪೊಲೀಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ನಡೆಸಿದ್ದರು. ಆದರೆ, ಸರಿಯಾದ ಸಾಕ್ಷ್ಯ ಸಿಕ್ಕಿರಲಿಲ್ಲ.
ದಿನೇ ದಿನೇ ಬೆಂಗಳೂರಲ್ಲಿ ನೆಮ್ಮದಿಯ ಜೀವನ ನಡೆಸುವುದೇ ಕಷ್ಟಕರವಾಗಿದ್ದು ಇದೀಗ ವಸತಿ ಸಮುಚ್ಚಯದಲ್ಲಿ ಇಂಥಾ ಕಿಡಿಗೇಡಿ ಕೆಲಸ ಬೆಳಕಿಗೆ ಬಂದಿರೋದು ಜನರಲ್ಲಿ ತೀವ್ರ ಆಘಾತ ಉಂಟುಮಾಡಿದೆ.
ಈ ಹಿಂದೆಯೂ ದೇಶವಿರೋಧಿ ಹಾಗೂ ಧರ್ಮ-ಧರ್ಮಗಳ ನಡುವೆ ಬೆಂಕಿ ಹಚ್ಚುವ ಪ್ರಕರಣಗಳು ನಡೆದಿದ್ದು, ವಿಜಯನಗರ ಜಿಲ್ಲೆ ಹೊಸಪೇಟೆ ಸರ್ಕಾರಿ ಶಾಲೆಯ ಗೋಡೆ ಮೇಲೆ ‘ಹಿಜಾಬ್ ನಮ್ಮ ಘನತೆ’ ಎಂಬ ಬರಹ ಬರೆಯಲಾಗಿತ್ತು. ಈ ಸಂಬಂಧ ಮುಜಮ್ಮಿಲ್, ಮೊಹಮ್ಮದ್ ಜಮಾಲ್ ವಿರುದ್ಧ ಕೇಸ್ ದಾಖಲಾಗಿತ್ತು. ಶಾಲಾ ಗೋಡೆ ಮೇಲೆ ಬರೆದಿದ್ದರಿಂದ ಮುಖ್ಯೋಪಾಧ್ಯಾಯರು ನೀಡಿದ ದೂರಿನ ಪ್ರಕಾರ, ಮಾರ್ಚ್ 16, 2022 ರಂದು ಇಬ್ಬರ ವಿರುದ್ಧ ತೆರೆದ ಪ್ರದೇಶಗಳ ವಿರೂಪ ತಡೆ ಕಾಯ್ದೆಯಡಿ ಕೇಸ್ ದಾಖಲಿಸಲಾಗಿತ್ತು.
ಈ ಪ್ರಕರಣ ರದ್ದುಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ಅರ್ಜಿದಾರರ ವಾದ ಪುರಸ್ಕರಿಸಿ ಕೇಸ್ ರದ್ದುಪಡಿಸಿತ್ತು. ಬರಹ ಬರೆದ ಶಾಲೆ ಹೊಸಪೇಟೆ ಪಟ್ಟಣಕ್ಕೆ ಅನ್ವಯವಾಗುವುದಿಲ್ಲ. ಕಾಯ್ದೆ ಹೊಸಪೇಟೆಗೆ ಅನ್ವಯಿಸಲು ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ ಎಂದು ಆರೋಪಿಗಳ ಪರ ವಕೀಲರು ಕೋರ್ಟ್ ಮುಂದೆ ವಾದ ಮಂಡಿಸಿದ್ದರು. ಅದನ್ನು ಆಲಿಸಿದ ಕೋರ್ಟ್, ಅರ್ಜಿದಾರರ ವಾದ ಪುರಸ್ಕರಿಸಿ ಕೇಸ್ ರದ್ದುಗೊಳಿಸಿ ಆದೇಶ ನೀಡಿತ್ತು.
