ಹ್ಯಾಂಡ್‌ಶೇಕ್, ಏಷ್ಯಾ ಕಪ್ ವಿವಾದದ ನಡುವೆಯೇ ಮತ್ತೊಂದು ‘ಭಾರತ vs ಪಾಕಿಸ್ತಾನ’ ಪಂದ್ಯ: ಹಾಂಗ್ ಕಾಂಗ್ ಕ್ರಿಕೆಟ್ ಸಿಕ್ಸಸ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿ!

ಮುಂಬೈ: ಹ್ಯಾಂಡ್‌ಶೇಕ್, ಏಷ್ಯಾ ಕಪ್ (Asia Cup) ವಿವಾದದ ಬೆನ್ನಲ್ಲೇ ಮತ್ತೆ ಭಾರತ (India) ಮತ್ತು ಪಾಕಿಸ್ತಾನದ (Pakistan) ಮಧ್ಯೆ ಕ್ರಿಕೆಟ್ ಪಂದ್ಯ ನಡೆಯಲಿದೆ.

ಇದೇ ನ. 7 ರಿಂದ 9 ರವರೆಗೆ ಈ ಟೂರ್ನಿ ಹಾಂಕಾಂಗ್‌ನಲ್ಲಿ ನಡೆಯಲಿದೆ. ಹಾಂಕಾಂಗ್ ಕ್ರಿಕೆಟ್ ಸಿಕ್ಸಸ್ (Hong Kong Cricket Sixes) ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಕುವೈತ್ ಒಂದೇ ಗುಂಪಿನಲ್ಲಿದೆ.
ಹಾಂಕಾಂಗ್ ಸಿಕ್ಸಸ್ ಆರು ಓವರ್ ಪಂದ್ಯಾವಳಿಯಾಗಿದ್ದು, ಒಟ್ಟು 12 ತಂಡಗಳು ಭಾಗವಹಿಸುತ್ತಿವೆ. ಭಾರತವನ್ನು ಮಾಜಿ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಮುನ್ನಡೆಸಲಿದ್ದಾರೆ. ಕಾರ್ತಿಕ್ ಅಲ್ಲದೇ ಮಾಜಿ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಕೂಡ ತಂಡದ ಭಾಗವಾಗಿದ್ದಾರೆ.
ಮೂರು ದಿನಗಳ ಈ ಪಂದ್ಯಾವಳಿಯಲ್ಲಿ ಆಫ್ರಿಕಾ, ಅಫ್ಘಾನಿಸ್ತಾನ, ನೇಪಾಳ, ಆಸ್ಟ್ರೇಲಿಯಾ, ಇಂಗ್ಲೆಂಡ್, ಯುಎಇ, ಭಾರತ, ಪಾಕಿಸ್ತಾನ, ಕುವೈತ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಹಾಂಕಾಂಗ್ ತಂಡಗಳು ಭಾಗವಹಿಸಲಿವೆ.
ಯಾವ ರೀತಿ ಪಂದ್ಯ?
ಹಾಂಕಾಂಗ್ ಸಿಕ್ಸಸ್ ತಲಾ ಆರು ಓವರ್‌ಗಳ ಪಂದ್ಯಾವಳಿಯಾಗಿದ್ದು, ಪ್ರತಿಯೊಬ್ಬ ಆಟಗಾರ (ವಿಕೆಟ್ ಕೀಪರ್ ಹೊರತುಪಡಿಸಿ) ಕನಿಷ್ಠ ಒಂದು ಓವರ್ ಬೌಲ್ ಮಾಡಬೇಕು ಮತ್ತು ಒಬ್ಬ ಆಟಗಾರನಿಗೆ ಮಾತ್ರ ಸತತವಾಗಿ ಎರಡು ಓವರ್‌ಗಳನ್ನು ಬೌಲ್ ಮಾಡುವ ಅವಕಾಶ ಸಿಗುತ್ತದೆ.
5 ಓವರ್‌ಗಳು ಪೂರ್ಣಗೊಳ್ಳುವ ಮೊದಲು ಐದು ವಿಕೆಟ್‌ಗಳು ಪತನಗೊಂಡರೆ ಉಳಿದಿರುವ ಕೊನೆಯ ಬ್ಯಾಟ್ಸ್‌ಮನ್ ಬ್ಯಾಟಿಂಗ್ ಮಾಡುತ್ತಾನೆ ಮತ್ತು ಐದನೇ ಬ್ಯಾಟ್ಸ್‌ಮನ್ ರನ್ನರ್ ಆಗಿ ಕಾರ್ಯನಿರ್ವಹಿಸುತ್ತಾನೆ. ಕೊನೆಯ ಬ್ಯಾಟರ್ ಯಾವಾಗಲೂ ಸ್ಟ್ರೈಕ್ ತೆಗೆದುಕೊಳ್ಳುತ್ತಾನೆ. ಆರನೇ ವಿಕೆಟ್ ಪತನಗೊಂಡರೆ ಇನ್ನಿಂಗ್ಸ್ ಪೂರ್ಣಗೊಳ್ಳುತ್ತದೆ