ಹಾಸನದಲ್ಲಿ ಮತ್ತೆ ಕಾಡಾನೆ ದಾಳಿ: ನಾಲ್ಕು ತಿಂಗಳಲ್ಲಿ ಆರು ಬಲಿ – ಶಾಶ್ವತ ಪರಿಹಾರದ ಆಗ್ರಹ

ಹಾಸನ: ಹಾಸನ ಜಿಲ್ಲೆಯಲ್ಲಿ ಮಾನವ-ಪ್ರಾಣಿ ಸಂಘರ್ಷ ನಿಲ್ಲುತ್ತಿಲ್ಲ. ಕಾಡಾನೆ ದಾಳಿಗೆ ಮತ್ತೋರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಗಜೇಂದ್ರಪುರ ಗ್ರಾಮದ ಚಂದ್ರಮ್ಮ (45) ಮೃತದುರ್ದೈವಿ. ಈ ಮೂಲಕ ಕಾಡಾನೆ ದಾಳಿಗೆ ನಾಲ್ಕು ತಿಂಗಳಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಚಂದ್ರಮ್ಮ ಅವರು ಬೇಲೂರು ತಾಲೂಕಿನ ಅಂಕಿಹಳ್ಳಿ ಗ್ರಾಮದಲ್ಲಿನ ಕರುಣ್ ಎಂಬುವವರ ಕಾಫಿ ತೋಟದ 12 ಮಂದಿ ಮಹಿಳಾ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಕಾಡಾನೆ ದಾಳಿ ಮಾಡಿದ್ದು, ಚಂದ್ರಮ್ಮ ಅವರು ಮೃತಪಟ್ಟಿದ್ದಾರೆ. 11 ಮಂದಿ ಕಾರ್ಮಿಕರು ಸ್ಥಳದಿಂದ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಶುಕ್ರವಾರ 12 ಮಂದಿ ಮಹಿಳೆಯರು ಒಟ್ಟಾಗಿ ಬೆಳಿಗ್ಗೆ 8:30ಕ್ಕೆ ಸರಿಯಾಗಿ ಡಾ. ಕರ್ಣ ಎಂಬುವವರ ತೋಟಕ್ಕೆ ಕೆಲಸಕ್ಕೆ ಹೋದರು. ಇನ್ನೇನು ಕೆಲಸ ಆರಂಭಿಸಬೇಕು ಎನ್ನುವ ಹೊತ್ತಿನಲ್ಲಿ ಆನೆ ಗೀಳು ಕೇಳಿಸಿದೆ. ತಿರುಗಿ ನೋಡಿದರೇ ಐದು ಆನೆಗಳ ಹಿಂಡು ಕಾಫಿ ತೋಟದಲ್ಲಿ ಬರುತ್ತಿರುವುದು ಕಂಡಿದೆ. ಜೀವ ಭಯದಲ್ಲಿ ಅಲ್ಲಿದ್ದ ಕಾರ್ಮಿಕ ಮಹಿಳೆಯರೆಲ್ಲ ದಿಕ್ಕೆಟ್ಟು ಓಡಿದ್ದಾರೆ.
ಆದರೆ, ಓಡಲು ಸಾಧ್ಯವಾಗದ ಚಂದ್ರಮ್ಮ ಅವರ ಮೇಲೆ ಆನೆ ದಾಳಿ ಮಾಡಿದೆ. ಆನೆ ತುಳಿತಕ್ಕೆ ಗಂಭಿರವಾಗಿ ಗಾಯಗೊಂಡಿದ್ದ ಚಂದ್ರಮ್ಮ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬಂದ ನೂರಾರು ಜನರು ಘಟನೆ ಖಂಡಿಸಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಅರಣ್ಯ ಸಚಿವರು ಬರಬೇಕೆಂದು ಪಟ್ಟು ಹಿಡಿದು ಮೃತದೇಹ ಮೇಲೆತ್ತಲು ಬಿಡದೆ ಹೋರಾಟ ನಡೆಸಿದರು.
ಸರಣಿ ಸಾವುಗಳಿಗೆ ಬ್ರೇಕ್ ಹಾಕಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ ಎಂದು ಆಕ್ರೋಶ ಹೊರ ಹಾಕಿದರು. ರಸ್ತೆ ತಡೆ ನಡೆಸಿ ಅಸಮಧಾನ ಹೊರ ಹಾಕಿದರು. ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಎದುರು ತಮ್ಮ ನೋವು ತೋಡಿಕೊಂಡ ಜನರು “ಹೀಗೆ ಮುಂದುವರೆದರೆ ನಾವು ಬದುಕುವುದು ಹೇಗೆ? ನಮ್ಮ ಜೀವಕ್ಕೆ ಬೆಲೆಯಿಲ್ಲ. ಸ್ವಲ್ಪ ಹೆಚ್ಚುಕಮ್ಮಿ ಆಗಿದ್ದರೂ ಇನ್ನೂ ಹಲವರು ಬಲಿಯಾಗಬೇಕಿತ್ತು. ಆದರೆ, ಇಂದು ಬದುಕಿದ್ದೇವೆ, ನಾಳೆ ಏನೋ ಆಗುತ್ತೋ ಗೊತ್ತಿಲ್ಲ ಸಮಸ್ಯೆ ಬಗೆಹರಿಸಿ” ಎಂದು ಆಗ್ರಹಿಸಿದರು.
ಇದೇ ವರ್ಷ ಜನವರಿ 22 ರಂದು ಆಲೂರು ತಾಲ್ಲೂಕಿನ ಅಡಿಬೈಲಿನ ಪುಟ್ಟಯ್ಯ ಎಂಬುವರು ಆನೆ ದಾಳಿಯಿಂದ ಮೃತಪಟ್ಟಿದ್ದರು. ನಂತರ ಫೆಬ್ರವರಿ 13ರಂದು ಬೇಲೂರು ತಾಲ್ಲೂಕಿನ ಬೆಳ್ಳಾವರ ಗ್ರಾಮದಲ್ಲಿ ಮಹಿಳೆ ದ್ಯಾವಮ್ಮ ಅವರ ಸಾವು, ಬಳಿಕ ಇದೇ ತಾಲ್ಲೂಕಿನ ಅಣ್ಣಾಮಲೈ ಎಸ್ಟೇಟ್ನಲ್ಲಿ ಕಾರ್ಮಿಕ ಅನಿಲ್, ತದನಂತರ ಬೊಮ್ಮೇನಹಳ್ಳಿ ಗ್ರಾಮದಲ್ಲಿ ಮಹಿಳೆ ಸುಶೀಲಮ್ಮ ಎಂಬುವರು ಆನೆ ದಾಳಿಯಲ್ಲಿ ಮೃತಪಟ್ಟಿದ್ದಾರೆ.
ಜನರ ತೀವ್ರ ಹೋರಾಟದ ಬಳೀಕ ಎಚ್ಚೆತ್ತಿದ್ದ ಸರ್ಕಾರ ಸಾಕಾನೆಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಮೂರು ಪುಂಡಾನೆ ಸೆರೆ ಹಿಡಿದು, ಎರಡು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಸಮಸ್ಯೆಗೆ ಮುಕ್ತಿ ನೀಡುವ ಪ್ರಯತ್ನ ಮಾಡಿತ್ತು. ಆದರೆ, ಏಪ್ರಿಲ್ 25ರಂದು ಮತ್ತೆ ಸಕಲೇಶಫುರ ತಾಲ್ಲೂಕಿನ ಅಡಿಬೈಲು ಗ್ರಾಮದಲ್ಲಿ ಬೆಳೆಗಾರ ಷಣ್ಮುಕ ಅವರ ಸಾವು ಜಿಲ್ಲೆಯನ್ನು ಕಂಗೆಡಿಸಿತ್ತು. ಸಹಸ್ರಾರು ಜನರು ತೀವ್ರ ಹೋರಾಟ ನಡೆಸಿದ್ದರು. ಬಳಿಕ ಮತ್ತೆ ಕಾಡಾನೆ ಸೆರೆ ಕಾರ್ಯಾಚರಣೆ ಮಾಡಿ ನಾಲ್ಕು ಆನೆ ಸೆರೆಹಿಡಿಯಲಾಗಿತ್ತು. ಆದರೆ, ಸಮಸ್ಯೆ ಮಾತ್ರ ಕಡಿಮೆಯಾಗಿಲ್ಲ. ಇಂದು ಮತ್ತೊಬ್ಬರು ಆನೆ ದಾಳಿಗೆ ಮೃತಪಟ್ಟಿದ್ದಾರೆ.
ಚಂದ್ರಮ್ಮ ಅವರು ಕಾಡಾನೆ ದಾಳಿಗೆ ಅಮಾನುಷವಾಗಿ ಬಲಿಯಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸಿ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ರೂ, ಸಮಸ್ಯೆಗೆ ಶಾಶ್ವತ ಪರಿಹಾರದ ಬಗ್ಗೆ ಯಾವುದೇ ಭರವಸೆ ಸಿಕ್ಕಿಲ್ಲ. ಐದು ಆನೆಗಳು ಕಾಫಿತೋಟದಲ್ಲಿ ಇದ್ದರೂ ಕೂಡ ಈ ಬಗ್ಗೆ ಅರಣ್ಯ ಇಲಾಖೆಯ ಯಾವ ಸಿಬ್ಬಂದಿಯೂ ಕೂಡ ಮಾಹಿತಿ ನೀಡಿಲ್ಲ. ಮಾಹಿತಿ ನೀಡಿದ್ದರೇ ಈ ದುರಂತ ಸಂಭವಿಸುತ್ತಿರಲ್ಲ ಎಂದು ಜನರು ಅಸಮಧಾನ ಹೊರ ಹಾಕಿದರು.
ಈ ಬಗ್ಗೆ ಜಿಲ್ಲಾಧಿಕಾರಿ ಸಿ ಸತ್ಯಭಾಮ ಅವರು ಮಾತನಾಡಿ, ಈ ಬಗ್ಗೆ ದೂರುಗಳಿವೆ. ಜನರಿಗೆ ಉತ್ತರ ನೀಡಲು ಆಗದ ಪರಿಸ್ಥಿತಿ ಇದೆ. ಜನರು ಹೇಳಿದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಮೃತರ ಕುಟುಂಭಕ್ಕೆ ಪರಿಹಾರದ ಚೆಕ್ ನೀಡಲಾಗಿದೆ ಎಂದು ಹೇಳಿದರು.