ಜನಸಾಮಾನ್ಯರ ಮೇಲೆ ಮತ್ತೊಂದು ಹೊರೆ: ಇಂಧನ ಮೇಲಿನ ಅಬಕಾರಿ ಸುಂಕ ಹೆಚ್ಚಳ

ಹೊಸದಿಲ್ಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ತಲಾ 2 ರೂಪಾಯಿ ಹೆಚ್ಚಿಸಿದೆ. ಈ ಬದಲಾವಣೆಯು 8 ಏಪ್ರಿಲ್ 2025 ರಿಂದ ಜಾರಿಗೆ ಬರಲಿದೆ. ಕರ್ನಾಟಕದ ಜನರಿಗೆ ಇದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಇತ್ತೀಚೆಗಷ್ಟೇ ಕರ್ನಾಟಕ ಸರ್ಕಾರ ಡೀಸಲ್ ಮೇಲೆ ಎರಡು ರೂ. ಹೆಚ್ಚುವರಿ ತೆರಿಗೆ ಹೇರಿತ್ತು.

ಕಚ್ಚಾ ತೈಲ ಬೆಲೆಗಳು ಸೋಮವಾರ (ಏ.7) ಶೇಕಡಾ 3 ಕ್ಕಿಂತ ಹೆಚ್ಚು ಕುಸಿತ ಕಂಡಿರುವುದರಿಂದ, ಪ್ರಮುಖ ತೈಲ ಸಂಬಂಧಿತ ಕಂಪನಿಗಳ ಷೇರುಗಳು ಶೇಕಡಾ 19 ರಷ್ಟು ಕುಸಿತವಾಗಿವೆ. ಟ್ರೇಡ್ ವಾರ್‌ನಿಂದ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಗಳು ಇಳಿಕೆಯಾಗಿರುವ ಹೊತ್ತಿನಲ್ಲಿ ಕೇಂದ್ರ ಸರಕಾರ ಪೆಟ್ರೋಲ್, ಹಾಗೂ ಡೀಸೆಲ್ ಮೇಲಿನ ಸುಂಕವನ್ನು ಏರಿಕೆ ಮಾಡಿದೆ.
ಈ ಬಗ್ಗೆ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯ ಆದೇಶ ಹೊರಡಿಸಿದ್ದು, ಈ ಹೊಸ ಸುಂಕ ಹೇರಿಕೆ ಚಿಲ್ಲರೆ ಮಾರಾಟದ ಮೇಲೆ ಹೇಗೆ ಹಾಗೂ ಯಾವಾಗ ಪರಿಣಾಮ ಬೀರಲಿದೆ ಎನ್ನುವುರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.