ಬೆಂಗಳೂರಿನಲ್ಲಿ ಮತ್ತೊಮ್ಮೆ ಬಾಂಬ್ ಬೆದರಿಕೆ – ಕ್ರಿಸಲಿಸ್ ಹೈ ಶಾಲೆಗೆ ಇ-ಮೇಲ್

ಬೆಂಗಳೂರು: ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶವುಳ್ಳ ಇ-ಮೇಲ್ ಬರುವುದು ಮುಂದುವರಿದಿದೆ. ಇದೀಗ ಕ್ರಿಸಲಿಸ್ ಹೈ ಶಾಲೆಗೆ ಬಾಂಬ್ ಬೆದರಿಕೆ ಸಂದೇಶವುಳ್ಳ ಇ-ಮೇಲ್ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ ಎಂದು ಶಾಲಾ ಆಡಳಿತ ತಿಳಿಸಿದೆ. ಶಾಲೆಗೆ ವರ್ತೂರು ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ.

ಜುಲೈ 18 ರಂದು ಆರ್.ಆರ್ ನಗರ, ಕೆಂಗೇರಿಯ ಶಾಲೆಗಳೂ ಸೇರಿದಂತೆ ಬೆಂಗಳೂರಿನ 40 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಆಯಾ ಶಾಲೆಗಳಿಗೆ ಭೇಟಿ ನೀಡಿದ್ದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯದಳ ಸಿಬ್ಬಂದಿ ಮಕ್ಕಳನ್ನು ಹೊರಗೆ ಕಳುಹಿಸಿ ತಪಾಸಣೆ ಮಾಡಿದ್ದರು. ಬಳಿಕ ಅವುಗಳೆಲ್ಲ ಹುಸಿ ಬಾಂಬ್ ಬೆದರಿಕೆ ಸಂದೇಶಗಳು ಎಂಬುದು ಬೆಳಕಿಗೆ ಬಂದಿತ್ತು.
ತಿಂಗಳ ಹಿಂದಷ್ಟೇ ಹಾಸನದ ಮೂರು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದವು. ನಂತರ ಅವು ಹುಸಿ ಬೆದರಿಕೆ ಸಂದೇಶಗಳೆಂಬುದು ದೃಢಪಟ್ಟಿತ್ತು.