ಆನೇಕಲ್: ಕೌಟುಂಬಿಕ ಕಲಹಕ್ಕೆ ಬಲಿಯಾದ ದಂಪತಿ; ಪತ್ನಿಯ ಕುತ್ತಿಗೆ ಸೀಳಿ ಪತಿ ಆತ್ಮಹತ್ಯೆ

ಆನೇಕಲ್: ಪತ್ನಿಯನ್ನು ಕೊಂದು ಬಳಿಕ ತಾನೂ ನೇಣುಬಿಗಿದುಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಹೀಲಲಿಗೆಯಲ್ಲಿ ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದ ಒಡಿಶಾ ಮೂಲದ ಮಂಜುಳಾಳನ್ನು ಕೊಂದು ದೀಪಂತ್ ತಾನೂ ಪ್ರಾಣ ಬಿಟ್ಟಿದ್ದಾನೆ. ದಂಪತಿ ಬೊಮ್ಮಸಂದ್ರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಕಳೆದ ಬುಧವಾರ ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುವೆ ಗಲಾಟೆ ಆಗಿತ್ತು. ಗಲಾಟೆ ವಿಕೋಪಕ್ಕೆ ಹೋಗಿ ಮಂಜುಳಾ ಮೇಲೆ ದೀಪಂತ್ ಹಲ್ಲೆ ನಡೆಸಿದ್ದ. ಈ ವೇಳೆ ಮಂಜುಳಾ ಪ್ರಾಣ ಬಿಟ್ಟಿದ್ದಾಳೆ. ಬಳಿಕ ಶವದ ಮುಂದೆ ಕಣ್ಣೀರು ಹಾಕಿ ವಿಡಿಯೋ ಮಾಡಿದ್ದ ದೀಪಂತ್, ಮಂಜುಳಾ ಹಣೆಗೆ ಸಿಂಧೂರವಿಟ್ಟಿದ್ದ. ಬಳಿಕ ಒಡಿಶಾ ಭಾಷೆಯಲ್ಲಿ ಡೆತ್ನೋಟ್ ಬರೆದು ತಾನು ಕೂಡ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಅನುಮಾನಗೊಂಡ ಮನೆ ಮಾಲೀಕ ಕಿಟಕಿಯಲ್ಲಿ ನೋಡಿದಾಗ ಮಂಜುಳಾ ಮತ್ತು ದೀಪಂತ್ ಇಬ್ಬರೂ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ. ಕಳೆದ ಶುಕ್ರವಾರವೇ ಮನೆ ಮಾಲಿಕರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.